
ಕುಮಾರಿ ಸೌಜನ್ಯಾ ಫೇಸ್‌ಬುಕ್ ಪೇಜ್ ನಲ್ಲಿ ಚಾರಿತ್ರ್ಯಹರಣ ಆರೋಪ – ಪೇಜ್ ಅಡ್ಮಿನ್, ರಾಧಿಕಾ ಕಾಸರಗೋಡು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
- ಕರಾವಳಿ
- October 24, 2023
- No Comment
- 122
ನ್ಯೂಸ್ ಆ್ಯರೋ : ಕುಮಾರಿ ಸೌಜನ್ಯಾ ಎಂಬ ಫೇಸ್‌ಬುಕ್ ಖಾತೆಯಿಂದ ಚಾರಿತ್ರ್ಯಕ್ಕೆ ಧಕ್ಕೆಯಾಗುವ ಬರಹಗಳನ್ನು ಬರೆದು ಜೀವ ಬೆದರಿಕೆಯೊಡ್ಡಲಾಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಉಷಾ ಶಶಿಧರ ಶೆಟ್ಟಿ ಎಂಬವರು ದೂರು ನೀಡಿದ್ದು, ಅವರ ದೂರಿನ ಅನ್ವಯ ಕುಮಾರಿ ಸೌಜನ್ಯಾ ಎಂಬ ಫೇಸ್‌ಬುಕ್ ಪೇಜ್ ಅಡ್ಮಿನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
12 ವರ್ಷಗಳ ಹಿಂದೆ ನಡೆದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳದ ಕುಮಾರಿ ಸೌಜನ್ಯಾ ಹತ್ಯೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ವಿಚಾರವಾಗಿ ಎರಡು ತಂಡಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಕಳೆದ ಹಲವು ತಿಂಗಳಿನಿಂದ ಸಂಘರ್ಷ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಹಲವು ಚರ್ಚೆ, ಆರೋಪ ಪ್ರತ್ಯಾರೋಪಗಳು ಜೋರಾಗಿರುವ ಮಧ್ಯೆ ಈ ಪ್ರಕರಣ ದಾಖಲಾಗಿದೆ.
ಉಷಾ ನೀಡಿದ ದೂರಿನಲ್ಲೇನಿದೆ?
ಕಳೆದ ದಿನಾಂಕ 16ರಂದು ಕುಮಾರಿ ಸೌಜನ್ಯಾ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಉಷಾ ಅವರ ವಿರುದ್ಧ ಅಸಭ್ಯ ಹಾಗೂ ಅಶ್ಲೀಲವಾಗಿ ಬರೆಯಲಾಗಿದೆ. ಉಷಾ ಅವರ ಮಗನ ಹುಟ್ಟಿನ ಬಗ್ಗೆ ಅನುಮಾನವಿದ್ದು, ಡಿಎನ್ಎ ಟೆಸ್ಟ್ ಮಾಡಿಸಬೇಕು ಎಂದೆಲ್ಲಾ ಅಸಭ್ಯವಾಗಿ ಬರೆಯಲಾಗಿದೆ.
ಅದಲ್ಲದೆ ಇದನ್ನು ಬರೆದದ್ದು ಪ್ರಜ್ವಲ್ ಗೌಡ ಎಂಬುದಾಗಿ ಅವರು ದೂರಿದ್ದಾರೆ.

ಅದಲ್ಲದೆ ಅಕ್ಟೋಬರ್ 19 ರಂದು ರಾಧಿಕಾ ಕಾಸರಗೋಡು ಪೇಜಿನ ಅನಿತಾ ಶಾನ್ ಮೊಗ್ ಅವರು ಶುಭಕ್ಕನಿಗೆ ಇವತ್ತು ಶುಭ ವಿದಾಯ. ಮುಂದೆ ಇದೆ ಮಾರಿಹಬ್ಬ ಎಂದು ಮೆಸೇಜ್ ಮಾಡಿ ಬೆದರಿಕೆಯೊಡ್ಡಿದ್ದಾರೆ.
ಇಷ್ಟೇ ಅಲ್ಲದೆ ಅಕ್ಟೋಬರ್ 20 ರಂದು ಉಷಾ ಅವರ ಗಂಡನ ಮೊಬೈಲ್‌ಗೆ ಕರೆ ಮಾಡಿ, ಹೆಂಡತಿಯನ್ನು ಹದ್ದು ಬಸ್ಸಿನಲ್ಲಿಡು ಇಲ್ಲದಿದ್ದರೆ ಅವಳ ಫೇಸ್ ಬುಕ್ ನಲ್ಲಿ, ಬೇಕಾಬಿಟ್ಟಿ ಮೇಸೆಜ್ ಗಳನ್ನು ಹಾಕುತ್ತೇವೆ. ಅವಳ ಚಿತ್ರವನ್ನು ಹಾಕುತ್ತೇವೆ, ನಾವು ಅವಳನ್ನು ಬಿಡುವುದಿಲ್ಲ, ಅವಳು ಉಜಿರೆಯಲ್ಲಿ ಇರುವವಳು, ಅವಳನ್ನು ಕೊಲ್ಲಿಸುವ ವ್ಯವಸ್ಥೆ ನಮ್ಮಲ್ಲಿದೆ. ಬದುಕಬೇಕಾದರೆ ಮಹೇಶ್ ಶೆಟ್ಟಿ ಬಗ್ಗೆ ಮಾತನಾಡಬೇಡಿ ಎಂದು ಬೆದರಿಕೆಯೊಡ್ಡಿರುವುದಾಗಿ ಉಷಾ ಅವರು ಆರೋಪಿಸಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಕುಮಾರಿ ಸೌಜನ್ಯಾ ಹೆಸರಿನ ಫೇಸ್‌ಬುಕ್ ಪೇಜ್‌ನ ಅಡ್ಮಿನ್, ರಾಧಿಕ ಕಾಸರಗೋಡು ಫೇಸ್‌ಬುಕ್ ಪೇಜ್‌ನ ಅನಿತಾ ಮತ್ತು ಬೆದರಿಕೆ ಕರೆ ಮಾಡಿದ ಮೊಬೈಲ್ ನಂಬರ್ ಬಳಕೆದಾರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.