Mangalore : ಪಾಗಲ್ ಪ್ರೇಮಿಯಿಂದ ದೀಕ್ಷಾ ಕೊಲೆಯತ್ನ ಪ್ರಕರಣ – ಆರೋಪಿಗೆ 18 ವರ್ಷ ಜೈಲು, ಎರಡು ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ನ್ಯೂಸ್ ಆ್ಯರೋ : ಕಳೆದ 2019ರ ಜೂನ್ 28 ರಂದು ಮಂಗಳೂರಿನ ಕೆ‌.ಎಸ್.ಹೆಗ್ಡೆ ಆಸ್ಪತ್ರೆಯ ಹಿಂಭಾಗದಲ್ಲಿ ಯುವತಿಯೊಬ್ಬಳಿಗೆ ಪಾಗಲ್ ಪ್ರೇಮಿಯೊಬ್ಬ 18 ಬಾರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು ಆರೋಪಿ ಸುಶಾಂತ್ ಯಾನೆ ಶಾನ್ ಎಂಬಾತನಿಗೆ 18 ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಿಧಿಸಿದೆ‌.

ಮಂಗಳೂರಿನಲ್ಲಿ ಡಾನ್ಸರ್ ಆಗಿದ್ದ ಶಕ್ತಿನಗರ ನಿವಾಸಿ ಸುಶಾಂತ್ (22) ಹಾಗೂ ಕಾರ್ಕಳ ನಿಟ್ಟೆ ಕಾಲೇಜು ವಿದ್ಯಾರ್ಥಿನಿಯಾಗಿದ್ದ ದೀಕ್ಷಾ(20) ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ನಡುವೆ ವೈಮನಸ್ಯ ಉಂಟಾಗಿ ದೂರವಾಗಿದ್ದರು.

ಇದರಿಂದ ನೊಂದ ಆರೋಪಿ ಸುಶಾಂತ್ 2019 ರ ಜೂನ್ 28ರ ಶುಕ್ರವಾರ ಸಂಜೆ ವಿದ್ಯಾರ್ಥಿನಿ ದೀಕ್ಷಾ ಕಾಲೇಜು ಮಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ದೇರಳಕಟ್ಟೆ ಬಗಂಬಿಲದ ಸಮೀಪ ಆಕೆಯ ಮೇಲೆ ಚಾಕುವಿನಿಂದ ಮಾರಕ ದಾಳಿ ಮಾಡಿದ್ದ. ಅಲ್ಲದೆ ತಾನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂಬ್ರ 71/2019 ಕಲಂ 341, 354, 324, 326, 307, 309 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿತ್ತು.

ಪ್ರಸ್ತುತ ಬಜಪೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಅಂದಿನ ಉಳ್ಳಾಲ ಪೊಲೀಸ್‌ ಠಾಣಾ ಉಪ-ನಿರೀಕ್ಷಕ ಗುರಪ್ಪ ಕಾಂತಿ ಪ್ರಕರಣದ ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ದಿನಾಂಕ: 12.01.2024 ರಂದು ಆರೋಪಿ ಸುಶಾಂತ್ ನಿಗೆ ಭಾರತೀಯ ದಂಡ ಸಂಹಿತೆಯ 341, 326, 354, 307, 309 ಕಲಂಗಳ ಅಡಿಯಲ್ಲಿ ಒಟ್ಟು 18 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಲಕ್ಷ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಕ್ರ.ಸಂ ಕಲಂ ಶಿಕ್ಷೆಯ ಪ್ರಮಾಣ ಹೀಗಿದೆ..

  1. ಕಲಂ 341 ಐ.ಪಿ.ಸಿ 1 ತಿಂಗಳ ಸಾದಾ ಸಜೆ
  2. ಕಲಂ 326 7 ವರ್ಷಗಳ ಕಠಿಣ ಸಜೆ ಹಾಗೂ ರೂ 1 ಲಕ್ಷ ದಂಡವನ್ನು ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಆರೋಪಿಗೆ 1 ವರ್ಷಗಳ ಕಠಿಣ ಸಜೆ
  3. ಕಲಂ 307 ಐ.ಪಿ.ಸಿ 10 ವರ್ಷಗಳ ಕಠಿಣ ಸಜೆ ಹಾಗೂ ರೂ 1 ಲಕ್ಷ ದಂಡವನ್ನು ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಆರೋಪಿಗೆ 1 ವರ್ಷಗಳ ಕಠಿಣ ಸಜೆ
  4. ಕಲಂ 354 ಐ.ಪಿ.ಸಿ 1 ವರ್ಷಗಳ ಕಠಿಣ ಸಜೆ ಹಾಗೂ ರೂ 10,000 ದಂಡವನ್ನು ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಆರೋಪಿಗೆ 2 ತಿಂಗಳ ಕಠಿಣ ಸಜೆ,
  5. ಕಲಂ 309 ಐ.ಪಿ.ಸಿ ಅಡಿ ಆರೋಪಿಗೆ ರೂ 1,000 ದಂಡ

ನ್ಯಾಯಾಲಯವು ಮೇಲಿನ ಎಲ್ಲಾ ಶಿಕ್ಷೆಗಳನ್ನು ಒಂದಾದ ನಂತರ ಒಂದರಂತೆ (Consecutively) ಶಿಕ್ಷೆಯನ್ನು ವಿಧಿಸಿದ್ದು, ಒಟ್ಟು 18 ವರ್ಷ ಒಂದು ತಿಂಗಳುಗಳ ಕಾಲ ಮಾನ್ಯ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ವಿಧಿಸಿರುತ್ತದೆ.

ದಂಡದ ಮೊತ್ತ ರೂ 2 ಲಕ್ಷವನ್ನು ಸಂತ್ರಸ್ಥೆ ದೀಕ್ಷಾರವರಿಗೆ ಪರಿಹಾರವಾಗಿ ನೀಡುವಂತೆ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪ್ರೀತಿ ಕೆ.ಪಿ ರವರು ಅಂತಿಮ ತೀರ್ಪು ಹೊರಡಿಸಿರುತ್ತಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ನಾಯಕ್ ವಾದಿಸಿದ್ದರು.