
ದಿವಾಳಿಯಾದ ಅಮೆರಿಕಾದ ದೈತ್ಯ ಕಂಪೆನಿ ವಿವರ್ಕ್ – ಆರ್ಥಿಕ ಅಧಃಪತನಕ್ಕೆ ಕಾರಣವೇನು ಗೊತ್ತಾ?
- ಅಂತಾರಾಷ್ಟ್ರೀಯ ಸುದ್ದಿ
- November 7, 2023
- No Comment
- 86
ನ್ಯೂಸ್ ಆ್ಯರೋ : ಕೊರೊನಾ ಸಾಂಕ್ರಾಮಿಕ ಹೊಡೆತ ಸೇರಿದಂತೆ ಹಲವು ಕಾರಣಗಳಿಂದ ಯುಎಸ್ ನ ದೈತ್ಯ ಕಂಪೆನಿಯೊಂದು ದಿವಾಳಿಯಾಗಿದೆ. ಹಲವಾರು ವರ್ಷಗಳಿಂದ ನಷ್ಟದಲ್ಲಿರುವ ಕಂಪೆನಿಯನ್ನು ಮೇಲಕ್ಕೆತ್ತುವ ಎಲ್ಲ ಪ್ರಯತ್ನ ನಡೆಸಿ ಸೋತಿರುವ ಕಂಪೆನಿ ಈಗ ರಕ್ಷಣೆಗಾಗಿ ದಿವಾಳಿತನ ಘೋಷಿಸಲು ನ್ಯಾಯಾಲಯ ಮೆಟ್ಟಿಲೇರಿದೆ.
ಕೋ ವರ್ಕ್ ಸ್ಪೇಸ್ ಸೇವೆಗೆ ಹೆಸರುವಾಸಿಯಾಗಿರುವ ಯುಎಸ್ ಮೂಲದ ವಿವರ್ಕ್ ಕಂಪೆನಿಯು ನಷ್ಟದ ಜಾಲಕ್ಕೆ ಸಿಲುಕಿದ್ದು, ನ್ಯೂಜೆರ್ಸಿ ಫೆಡರಲ್ ನ್ಯಾಯಾಲಯದಲ್ಲಿ ದಿವಾಳಿತನ ಘೋಷಣೆ ಮಾಡಲು ದಾವೆ ಸಲ್ಲಿಸಿದೆ.
ಆಡಮ್ ನ್ಯೂಮನ್ ನೇತೃತ್ವದಲ್ಲಿ 2010ರಲ್ಲಿ ಸ್ಥಾಪನೆಯಾದ ವಿವರ್ಕ್ ಕಂಪೆನಿಯು ವ್ಯಕ್ತಿ ಮತ್ತು ಕಂಪೆನಿಗಳಿಗೆ ಅಲ್ಪಾವಧಿಯ ಆಧಾರದ ಮೇಲೆ ಜಾಗವನ್ನು ಬಾಡಿಗೆಗೆ ಮತ್ತು ಹಂಚಿಕೊಳ್ಳಲು ಕಚೇರಿ ಸ್ಥಳಗಳನ್ನು ಗುತ್ತಿಗೆಗೆ ನೀಡುತ್ತಿತ್ತು.
ಕಚೇರಿಗಳಲ್ಲಿ ಮುಕ್ತ ವಾತಾವರಣ, ಪ್ರಕಾಶಮಾನವಾದ ಬೆಳಕು, ಶಾಂತ ಮತ್ತು ಅಲಂಕಾರಯುತವಾದ ಸ್ಥಳವನ್ನು ಕಲ್ಪಿಸುವಲ್ಲಿ ಹೆಸರುವಾಸಿಯಾಗಿರುವ ವಿವರ್ಕ್ ಪ್ರಪಂಚದಾದ್ಯಂತ 700 ಕ್ಕೂ ಹೆಚ್ಚು ಸ್ಥಳಗಳನ್ನು ಮತ್ತು ಸುಮಾರು 7,30,000 ಸದಸ್ಯರನ್ನು ಹೊಂದಿತ್ತು.
ಸಾರ್ವಜನಿಕರಿಂದ ಹಣ ಸಂಗ್ರಹ ಪ್ರಯತ್ನದ ಬಳಿಕ ವಿವರ್ಕ್ ಬೇಡಿಕೆ ಕಡಿಮೆಯಾಗಿದ್ದು, ಸಹ-ಸಂಸ್ಥಾಪಕ ಆಡಮ್ ನ್ಯೂಮನ್ ಅವರನ್ನು ಕಂಪೆನಿಯಿಂದ ಹೊರಹಾಕಲಾಯಿತು. ಇದರೊಂದಿಗೆ ಕೋವಿಡ್ ಸಾಂಕ್ರಾಮಿಕ ಕಂಪೆನಿಗೆ ಭಾರೀ ಹೊಡೆತವನ್ನೇ ನೀಡಿತು. ಹೀಗಾಗಿ ಅನೇಕ ಕಚೇರಿಗಳು ಮುಚ್ಚಿದ್ದು, ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಕಂಪೆನಿಗೆ ಮತ್ತಷ್ಟು ಆಘಾತ ನೀಡಿತು. ಕಂಪೆನಿಯು ತನ್ನ ವ್ಯವಹಾರದ ಪಾಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದು, ಸಾಧ್ಯವಾಗದೆ ಈಗ ಸಮಯಾವಕಾಶ ಕೇಳಿದೆ.
10 ರಿಂದ 50 ಬಿಲಿಯನ್‌ವರೆಗೆ ಡಾಲರ್ ವರೆಗಿನ ಸಾಲ ಕಂಪೆನಿ ಮೇಲಿದ್ದು, ಇದನ್ನು ಪಡೆದಿರುವ ಸಾಲಗಾರರಿಂದ ಕಾನೂನು ರಕ್ಷಣೆ ಮತ್ತು ಭೂಮಾಲೀಕರೊಂದಿಗೆ ಮಾತುಕತೆಗಾಗಿ ಹೆಚ್ಚಿನ ಅವಕಾಶ ನೀಡುವಂತೆ ಕೋರಿ ಕಂಪೆನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಈ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ವಿವರ್ಕ್ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ಟೋಲಿ, ನಮ್ಮ ಸಂಸ್ಥೆಯ ಉನ್ನತಿಯಲ್ಲಿ ಹಲವರ ಪಾಲಿದೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದು ನಮಗೆ ಬೆಂಬಲವಾಗಿರುವ ಎಲ್ಲರಿಗೂ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.