ಕಲರ್ಸ್ ಕನ್ನಡದಿಂದ ಹೊರ ನಡೆದ ಪರಮೇಶ್ವರ್ ಗುಂಡ್ಕಲ್ – ಕಲರ್ಸ್ ನ ನಾವಿಕ ಈಗ ಜಿಯೋ ಸ್ಟುಡಿಯೋಸ್ ಮುಖ್ಯಸ್ಥ..!

ಕಲರ್ಸ್ ಕನ್ನಡದಿಂದ ಹೊರ ನಡೆದ ಪರಮೇಶ್ವರ್ ಗುಂಡ್ಕಲ್ – ಕಲರ್ಸ್ ನ ನಾವಿಕ ಈಗ ಜಿಯೋ ಸ್ಟುಡಿಯೋಸ್ ಮುಖ್ಯಸ್ಥ..!

ನ್ಯೂಸ್ ಆ್ಯರೋ : ವಿನೂತನ‌ ಪ್ರಯತ್ನಗಳ ಮೂಲಕ ಕನ್ನಡ ಕಿರುತೆರೆ ಜಗತ್ತಿನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಪರಮ್ ಗುಂಡ್ಕಲ್ ಕಲರ್ಸ್ ಕನ್ನಡ ವಾಹಿನಿಗೆ ರಾಜೀನಾಮೆ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಭಾವುಕರಾಗಿ ಪರಮ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಾಹಿನಿಯ ಉನ್ನತಸ್ಥಾನದಲ್ಲಿ ಇದ್ದವರು ರಾಜೀನಾಮೆ ನೀಡಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಹಲವರಲ್ಲಿತ್ತು. ಸದ್ಯ, ಆ ಎಲ್ಲಾ ಪ್ರಶ್ನೆಗಳಿಗೂ ಪರಮ್ ತಮ್ಮ ಬರವಣಿಗೆಯ ಮೂಲಕ ಉತ್ತರ ನೀಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಿಂದ ಹೊರ ನಡೆದಿರುವ ಪರಮ್ ಸದ್ಯ, ಇಂದಿನಿಂದ ಜಿಯೋ ಸ್ಟುಡಿಯೋಸ್ ಕನ್ನಡ ಬ್ಯುಸಿನೆಸ್ ಹೆಡ್ ಆಗಿ ಕೆಲಸ ಆರಂಭಿಸಿದ್ದಾರೆ. ಹತ್ತಾರು ಕನಸುಗಳೊಂದಿಗೆ ಈ ಜವಾಬ್ದಾರಿಯನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಎನ್ನಲಾಗಿದೆ. ಕಲರ್ಸ್ ವಾಹಿನಿಯಲ್ಲಿ ಇರುವಾಗಲೇ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡುವ ಕನಸು ಕಂಡಿದ್ದವರು ಪರಮ್. ಹಾಗಾಗಿ ಈ ನೂತನ ಜವಾಬ್ದಾರಿಯನ್ನು ವಯಾಕಾಮ್ 18 ಮುಖ್ಯಸ್ಥರು ಪರಮ್ ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹುಟ್ಟು ಪ್ರತಿಭಾನ್ವಿತನಾಗಿರುವ ಪರಮ್ ಸದಾ ವಿನೂತನ ಪ್ರಯೋಗಗಳ ಮೂಲಕವೇ ಗೆಲುವು ಕಂಡವರು. ಹೊಸತನವನ್ನೇ ಅರಸುವ ಇವರಿಗೆ ಬೇರುಮಟ್ಟದಿಂದಲೇ ವಾಹಿನಿ ಕಟ್ಟಿದ ಅನುಭವವಿದೆ. ಕ್ರಿಯಾತ್ಮಕ ಬರಹಗಾರರಾಗಿರುವ ಇವರು, ಇದೇ ಕಾರಣಕ್ಕೆ ಹೊಸ ಜವಾಬ್ದಾರಿಗೆ ಹೆಗಲಾಗಿದ್ದಾರೆ. ಈ ಜಿಯೋ ಸ್ಟುಡಿಯೋಸ್ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಹೊಸದೊಂದು ಹೆದ್ದಾರಿ ನಿರ್ಮಿಸುವ ಯೋಜನೆ ಪರಮ್ ಅವರಲ್ಲಿದೆ ಎನ್ನಲಾಗುತ್ತಿದೆ.

ಜಿಯೋ ಸ್ಟುಡಿಯೋಸ್‍ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದು ಸಿನಿಮಾ ನಿರ್ಮಾಣ, ವೆಬ್ ಸಿರೀಸ್ ತಯಾರಿಕೆ ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆಯಂತೆ. ಈಗಾಗಲೇ ಕನ್ನಡದ ಅನೇಕ ನಟರ, ನಿರ್ದೇಶಕರ ಜೊತೆ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ.

ಪರಮ್ ಕಲರ್ಸ್ ಕನ್ನಡದಲ್ಲಿ ಬ್ಯುಸಿನೆಸ್ ಹೆಡ್ ಆಗಿದ್ದರೂ ಹಲವು ಕಾರ್ಯಕ್ರಮಗಳಿಗೆ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಕನ್ನಡದ ಕೋಟ್ಯಧಿಪತಿ, ಬಿಗ್ ಬಾಸ್ ಸೇರಿದಂತೆ ಹಲವು ಕಾರ್ಯಕ್ರಮಗಳ ಯಶಸ್ಸಿನ‌ ಹಿಂದೆ ಇವರ ಕೈಚಳಕವಿದೆ. ಅಲ್ಲದೇ, ಚಿತ್ರ ನಿರ್ದೇಶನದ ಬಗ್ಗೆಯೂ ಅವರು ಮಾತನಾಡಿದ್ದರು. ಬಹುಶಃ ಜಿಯೋ ಸ್ಟುಡಿಯೋಸ್ ಮೂಲಕ ಆ ಕನಸನ್ನು ನನಸು ಮಾಡಿಕೊಳ್ಳವ ಸಾಧ್ಯತೆ ಇದೆ ಎನ್ನುವ ಮಾತುಗಳು ಹರಿದಾಡುತ್ತಿದೆ.

ಪರಮ್ ಬರೆದ ಭಾವನಾತ್ಮಕ ಸಾಲುಗಳು!

ಕಲರ್ಸ್ ಕನ್ನಡದ ಜವಾಬ್ದಾರಿ ಕಳಚಿ ಜಿಯೋ ಸ್ಟುಡಿಯೋಸ್ ಸೇರಿದ ಪರಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಬರಹವೊಂದನ್ನು‌ ಬರೆದಿದ್ದು, ಆ ಭಾವನಾತ್ಮಕ ಸಾಲುಗಳು‌ ಹೀಗಿವೆ.

ನಮ್ಮ ಕಡೆ ಮನೆಗಳಿಗೆ ಹೊಸದಾಗಿ ಒಂದೊಂದೇ ಟೆಲಿವಿಷನ್ ಬರುತ್ತಿರುವಾಗ ನಮ್ಮನೆಗೆ ಕರೆಂಟೂ ಬಂದಿರಲಿಲ್ಲ. ಮೊದಲನೇ ಸಲ ಕರೆಂಟ್ ಬಂದ ಒಂದು ಮಳೆಗಾಲದ ಸಂಜೆ ಅಕ್ಕನ ಜೊತೆ ಸೇರಿ ಬರೀ ಸ್ವಿಚ್ ಒತ್ತಿ ಲೈಟ್ ಆನ್ ಮಾಡುವುದು ಮತ್ತು ಆಫ್ ಮಾಡುವುದನ್ನೇ ಮಾಡುತ್ತಾ ಗಂಟೆಗಟ್ಟಲೇ ಕುಣಿದಾಡಿದ್ದು ನಿನ್ನೆ ಮೊನ್ನೆ ಆದ ಹಾಗೆ ನೆನಪಿದೆ. ಕಾರಣವಿಲ್ಲದೇ ಲೈಟ್ ಆನ್ ಮತ್ತು ಆಫ್ ಮಾಡುವುದೇ ನಮಗೆ ಸುಮಾರು ದಿನಗಳ ಕಾಲ ಎಂಟರಟೇನ್ಮೆಂಟ್ ಆಗಿತ್ತು.

ಈ ಟಿವಿಯಂಥ ಎಂಟರ್ ಟೇನ್ಮೆಂಟ್ ವಾಹಿನಿಗಳು ಕನ್ನಡದಲ್ಲಿ ಕತೆಗಳನ್ನು ಹೇಳತೊಡಗಿದಾಗ ನಮ್ಮನೆಗೆ ಕಲರ್ ಟಿವಿ ಬಿಡಿ, ಇನ್ನೂ ಟಿವಿಯೇ ಬಂದಿರಲಿಲ್ಲ. ಗದ್ದೆ, ತೋಟಗಳಲ್ಲಿ ಕೆಲಸ ಮಾಡುತ್ತ, ದನ, ಕರು ಮೇಯಿಸುತ್ತಾ ಅಲೆದಾಡುತ್ತಿರುವಾಗ ನಾಲ್ಕು ಬ್ಯಾಂಡಿನ ರೇಡಿಯೋದಲ್ಲಿ ಧ್ವನಿ ಕೇಳಿಸಿಕೊಳ್ಳುತ್ತಾ ಕಲರ್ ಕಲರ್ ಚಿತ್ರಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾ ಯಾವತ್ತಾದರೂ ಒಂದು ದಿನ ಕತೆ ಹೇಳಬೇಕೆಂದು ಕಾತರಿಸುತ್ತಿದ್ದ ಟೈಮ್ ಅದು. ಆ ಅವಕಾಶ ಮೊದಲು ಸಿಕ್ಕಿದ್ದು ಕನ್ನಡ ಪತ್ರಿಕೆಗಳಲ್ಲಿ. ನಂತರ ಸಿಕ್ಕಿದ್ದು ಟೀವಿಯಲ್ಲಿ.

ಟೆಲಿವಿಷನ್ ಸೇರಿಕೊಂಡ ಮೊದಮೊದಲು ತುಂಬಾ ಬೆರಗು ಹುಟ್ಟಿಸಿದ್ದ ಕಂಪನಿ ವಯಾಕಾಮ್18 ಸರಿಯಾದ ಟೈಮಲ್ಲಿ ಸರಿಯಾದ ಜಾಗದಲ್ಲಿ ಇದ್ದಿದ್ದರಿಂದಲೋ ಏನೋ. ಒಂದು ದಿನ ಅದೇ ಕಂಪನಿಯ ಕಲರ್ಸ್ ಚಾನೆಲ್ಲನ್ನು ಕನ್ನಡದಲ್ಲಿ ರೂಪಿಸುವ ಅವಕಾಶ ಸಿಕ್ಕಿಬಿಟ್ಟದ್ದು ಮಾತ್ರ ಬಹುಶಃ ಅದೃಷ್ಟ. ಅಷ್ಟೇ ಅನಿರೀಕ್ಷಿತ.

ಒಟ್ಟಾರೆ ಹತ್ತೂವರೆ ವರ್ಷ ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಕನ್ನಡತಿ ಥರದ ಕತೆಗಳು, ಬಿಗ್ ಬಾಸ್, ಡಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್, ಕನ್ನಡದ ಕೋಟ್ಯಾಧಿಪತಿ, ಅನುಬಂಧ ಥರದ ಒಂದಿಷ್ಟು ಶೋಗಳು. ರಿಬ್ರಾಂಡಿಂಗ್, ಎಚ್ ಡಿ ಚಾನೆಲ್, ಎರಡನೇ ಚಾನೆಲ್, ಸಿನಿಮಾ ಚಾನೆಲ್, ವೂಟ್ ಹೀಗೆ ಒಂದೊಂದೂ ಕಲರ್‍ ಕಲರ್ ಅನುಭವ. ಗೆದ್ದ ಖುಷಿ, ಸೋತ ನೋವು, ತಪ್ಪು ಮಾಡಿ ಕಲಿತ ಪಾಠ, ಆ ಕಾರಣವಾಗಿ ಸಿಕ್ಕಿದ ಮೆಚ್ಚುಗೆ, ಸಕಾರಣವಾಗಿ ಆದ ಟೀಕೆ ಮತ್ತು ಅವಮಾನ, ಕತೆ ಹುಟ್ಟಿ ಸಂಭ್ರಮಿಸಿದ ದಿನಗಳು, ಕತೆ ಹುಟ್ಟದೇ ಗೊಂದಲಗೊಂಡ ಕ್ಷಣಗಳು, ದಾರಿಯಲ್ಲಿ ಸಿಕ್ಕಿದ ನಕ್ಷತ್ರಗಳು, ಹೆಕ್ಕಿಕೊಂಡ ಭಾವನೆಗಳೆಲ್ಲ ಸೇರಿ ತಿರುಗಿ ನೋಡಿದಾಗ ಸಿಕ್ಕಾಪಟ್ಟೆ ಸಮಾಧಾನ. ಸಂತೃಪ್ತಿ. ಹತ್ತೂವರೆ ವರ್ಷಗಳಲ್ಲಿ ಏನೇನೋ ಆಯಿತು. ಆಗಿದ್ದೆಲ್ಲಾ ಒಳ್ಳೆಯದಕ್ಕೇ ಆಯಿತು..!

ತೀವ್ರವಾಗಿ ಮತ್ತು ಪ್ರಾಮಾಣಿಕವಾಗಿ ಕನಸು ಕಂಡರೆ ಸಾಕು. ಸ್ವಲ್ಪ ಮನಸ್ಸಿಟ್ಟು ಚೂರು ಪಾರು ಇಷ್ಟಪಟ್ಟು ಕೆಲಸ ಮಾಡಿದರೆ ಸಾಕು. ಯಾವ ನಕ್ಷತ್ರವಾದರೂ ಸಿಕ್ಕುತ್ತದೆ..! ಮಿಲ್ಲರ್ಸ್ ರೋಡಿನ ಐದನೇ ಫ್ಲೋರಿನ ಆಫೀಸಿನಲ್ಲಿ ಕುಡಿದ ಚಹಾ ಕಪ್ಪುಗಳ ಲೆಕ್ಕ ಗೊತ್ತಿಲ್ಲ. ಅಷ್ಟೆಲ್ಲಾ ಚಹಾ ಕುಡಿದರೂ ಇನ್ನಷ್ಟು ಕುಡಿಯುವ ಆಸೆ ಇದ್ದೇ ಇದೆ. ಸಿಕ್ಕಿದ ಒಬ್ಬಬ್ಬ ವ್ಯಕ್ತಿಯನ್ನೂ ಇನ್ನೊಂದು ಸಲ ಮಾತಾಡಿಸುವ ಮನಸ್ಸಾಗುತ್ತದೆ. ಹೇಳಿದ ಕತೆಗಳನ್ನು ಇನ್ನೊಂದು ಸಲ ಚೂರು ಸರಿಮಾಡಿಕೊಂಡು ಹೇಳಿಬಿಡೋಣ ಎಂಬ ಕನಸು ಬೀಳುತ್ತದೆ.

ಇವತ್ತು ಬೆಳಿಗ್ಗೆಯಿಂದ ಟಿವಿ ಕೆಲಸ ಇಲ್ಲ ಎಂದು ಯೋಚಿಸಿ ಮನಸ್ಸು ಒದ್ದೆಯಾಗಿದೆ. ಒಳ್ಳೇದು ಮಾತ್ರ ಆಗಲಿ ಅಂತ ಹಾರೈಸಬೇಡಿ. ಒಳ್ಳೆಯದು, ಕೆಟ್ಟದ್ದು, ಖುಷಿ, ದುಃಖ, ಗೆಲುವು, ಸೋಲು, ಅಸೂಯೆ, ಸಂಕಟ, ಪ್ರೀತಿ, ಆಘಾತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲಿಕೆ ಹೀಗೆ ಎಲ್ಲವೂ ಆಗಲಿ ಎಂದು ಹೇಳಿ. ಜೀವನವೇ ಆಗಲಿ ಎಂದು ಹಾರೈಸಿ. ಥ್ಯಾಂಕ್ಯೂ ವಯಾಕಾಮ್18, ಥ್ಯಾಂಕ್ಯೂ ಕಲರ್ಸ್ ಕನ್ನಡ. ಹೋಗಿ ಬರುವೆ. ನಮಸ್ಕಾರ!’ ಎಂಬುದಾಗಿ ಪರಮ್ ಬರೆದುಕೊಂಡಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *