
School Timings : ಶಾಲೆಗಳ ಸಮಯದಲ್ಲಿ ಬದಲಾವಣೆ ಸಾಧ್ಯತೆ – ಯಾಕೆ ಈ ಕ್ರಮ? ಪಾಲಕರ ವಿರೋಧ ಯಾಕೆ ಗೊತ್ತ?
- ಶಿಕ್ಷಣ
- September 18, 2023
- No Comment
- 65
ನ್ಯೂಸ್ ಆ್ಯರೋ : ಇನ್ನು ಮುಂದೆ ರಾಜ್ಯಾದ್ಯಂತ ಶಾಲೆಗಳಲ್ಲಿ ಬೆಲ್ ಬೇಗ ಮೊಳಗಲಿದೆಯೇ? ಸದ್ಯ ಇಂತಹದ್ದೊಂದು ಅನುಮಾನ ಮೂಡಲೂ ಕಾರಣವಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಶಾಲೆ ಮತ್ತು ಕಾರ್ಖಾನೆಗಳ ಸಮಯ ಬದಲಾವಣೆ ಮಾಡುವಂತೆ ಹೈಕೋರ್ಟ್ ಸೂಚಿಸಿದೆ. ಒಂದು ವೇಳೆ ಇದು ಜಾರಿಯಾದರೆ ಬೆಳಗ್ಗೆ 9ರ ಬದಲು 8 ಗಂಟೆಗೆ ಶಾಲೆ ಆರಂಭವಾಗುವ ಸಾಧ್ಯತೆ ಇದ್ದು, ಈ ನಡೆಗೆ ವಿರೋಧ ವ್ಯಕ್ತವಾಗಿದೆ.
ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಪ್ರತಿನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಹೇಳಿದ್ದು, ಸಮಯ ಬದಲಾವಣೆ ಬೆಂಗಳೂರಿಗೆ ಮಾತ್ರ ಮಾಡಬೇಕೆ ಅಥವಾ ರಾಜ್ಯಾದ್ಯಂತ ಅನ್ವಯಿಸಬೇಕೆ ಎನ್ನುವುದನ್ನು ಸಭೆಯ ಬಳಿಕ ತೀರ್ಮಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಮಯ ಬದಲಾವಣೆ ಪ್ರಸ್ತಾವನೆಗೆ ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಳಗ್ಗೆ 8 ಗಂಟೆಗೆ ಶಾಲೆ ಆರಂಭವಾದರೆ ಮಕ್ಕಳಿಗೆ ಕಷ್ಟವಾಗಲಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಮುಖಂಡರ ಸಭೆ ಕರೆದು ಅಂತಿನ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಚೌತಿ ಹಬ್ಬದ ಬಳಿಕ ಸಭೆ ನಡೆಯುವ ಸಾಧ್ಯತೆ ಇದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಬೆಂಗಳೂರಿನಲ್ಲಿ ಹದಗೆಟ್ಟಿರುವ ಟ್ರಾಫಿಕ್ ಪರಿಸ್ಥಿತಿ ಕುರಿತು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ಸಲಹೆ ನೀಡಿದೆ. ಶಾಲೆಗಳ ಜೊತೆಗೆ ಕೈಗಾರಿಕೆ, ಕಾರ್ಪೋರೇಟ್ ವ್ಯವಹಾರಗಳ ಸಮಯವನ್ನೂ ಬದಲಾಯಿಸುವಂತೆ ಸೂಚನೆ ನೀಡಿದೆ.
ಇದು ಹೈಕೋರ್ಟ್ ಸಲಹೆಯಾಗಿದ್ದರಿಂದ ನಾವು ತೀರ್ಪಿನ ಪ್ರತಿಗಾಗಿ ಕಾಯುತ್ತಿದ್ದೇವೆ. ಬಳಿಕ ಸಮಸ್ಯೆಯನ್ನು ಚರ್ಚಿಸಲು ಮಧ್ಯಸ್ಥಗಾರರೊಂದಿಗೆ ಸಭೆ ಕರೆಯುತ್ತೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.