11 ವರ್ಷಗಳ ಬಳಿಕ ಕರಾವಳಿ ಕಮಲ ಪಾಳಯದಲ್ಲಿ ‘ಸೌಜನ್ಯಾ’ ಕನವರಿಕೆ, ಇಲ್ಲದ ಮಮಕಾರ ಉಕ್ಕಿ ಹರಿದಿದ್ಯಾಕೆ? – ಬಿಜೆಪಿ ಅಧಿಕೃತ ಎಂಟ್ರಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ? ತಿಮರೋಡಿ – ಪುತ್ತಿಲ ಪರಿವಾರದ ನಡುವೆ ಹೊಂಚು ಹಾಕಿದೆ ಬಿಜೆಪಿ‌‌..!?

11 ವರ್ಷಗಳ ಬಳಿಕ ಕರಾವಳಿ ಕಮಲ ಪಾಳಯದಲ್ಲಿ ‘ಸೌಜನ್ಯಾ’ ಕನವರಿಕೆ, ಇಲ್ಲದ ಮಮಕಾರ ಉಕ್ಕಿ ಹರಿದಿದ್ಯಾಕೆ? – ಬಿಜೆಪಿ ಅಧಿಕೃತ ಎಂಟ್ರಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ? ತಿಮರೋಡಿ – ಪುತ್ತಿಲ ಪರಿವಾರದ ನಡುವೆ ಹೊಂಚು ಹಾಕಿದೆ ಬಿಜೆಪಿ‌‌..!?

ನ್ಯೂಸ್ ಆ್ಯರೋ : ಕುಮಾರಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಾಢ ನಿದ್ದೆಗೆ ಜಾರಿದ್ದ ರಾಜ್ಯ ಬಿಜೆಪಿಯ ಕರಾವಳಿ ಬಿಜೆಪಿ ಘಟಕ ಹಠಾತ್ತಾಗಿ ನಿದ್ದೆಯಿಂದ ಕಣ್ಣು ಬಿಟ್ಟಿದೆ‌‌. ಸೌಜನ್ಯಾ ಕೊಲೆ ಪ್ರಕರಣದ ತೀರ್ಪು ಹೊರಬಂದು ಸರಿಸುಮಾರು ಒಂದು ತಿಂಗಳ ಬಳಿಕ ಕೆಲ ಶಾಸಕರೊಂದಿಗೆ ಮಂಗಳೂರಿನಲ್ಲಿ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲ್ ಜುಲೈ 28 ರಂದು ಬೆಳ್ತಂಗಡಿಯಲ್ಲಿ ಸೌಜನ್ಯಾ ಪ್ರಕರಣದ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವ ಮಾತನ್ನಾಡಿದ್ದಾರೆ.

11 ವರ್ಷಗಳ ಕಾಲ ಇಲ್ಲದ ಸೌಜನ್ಯಾ ಮೇಲಿನ ಮಮಕಾರ ಸದ್ಯ ಬಾನಿಂದ ಉದುರಿ ಬಿದ್ದಂತೆ ಬಿಜೆಪಿ ಮೈಕೊಡವಿ ಏಳಲು ಕಾರಣವಾದ ಅಂಶವೇನು ಅನ್ನೋದು ಸದ್ಯದ ಕೌತುಕ. ಆದರೆ ಇದರ ಹಿಂದಿರುವ ಕಾರಣ ಸ್ಫಟಿಕದಷ್ಟೇ ಸ್ಪಷ್ಟವಾಗಿದೆ. ಇದು ಮತ್ತೊಮ್ಮೆ ಮೊಸಳೆ ಕಣ್ಣೀರು ಪ್ರಹಸನ ಎಂಬ ಅನುಮಾನ ಶುರುವಾಗಿದೆ..!!

ಕರಾವಳಿಯಲ್ಲೂ ಅಸ್ತಿತ್ವ ಕಳೆದುಕೊಳ್ಳುವ ಭೀತಿ..!
ಕರಾವಳಿ ಭಾಗ ಹೊರತುಪಡಿಸಿ ರಾಜ್ಯದ ಉಳಿದೆಡೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಳಮಟ್ಟಕ್ಕೆ ಕುಸಿದು ಹೋಗಿದ್ದ ಬಿಜೆಪಿಗೆ ಸದ್ಯ ಕರಾವಳಿಯಲ್ಲಿ ತನ್ನ ಬೇರು ಗಟ್ಟಿ ಮಾಡಿಕೊಳ್ಳುವ ತವಕ. ಅತ್ತ ಒಂದೆಡೆ ಪುತ್ತಿಲ ಪರಿವಾರ ಕರಾವಳಿಯಲ್ಲಿ ಭಾಗಶಃ ನೆಲೆಯೂರಲು ಪ್ರಯತ್ನಿಸುತ್ತಿದ್ದರೆ ಇತ್ತ ಮಹೇಶ್ ಶೆಟ್ಟಿ ತಿಮರೋಡಿ ಎಂಬ ಹುಲಿ 11 ವರ್ಷಗಳ ಬಳಿಕವೂ ಘರ್ಜಿಸುವ ಪರಿಗೆ ಬಿಜೆಪಿ ಪಾಳಯ ದಿಕ್ಕು ತಪ್ಪಿದೆ‌. ಇದರ ನಡುವೆ ಶತಾಯಗತಾಯ ತಮ್ಮ ಇರುವಿಕೆಯನ್ನು ಸಾರಿ ಹೇಳುವ ಸಲುವಾಗಿ, ತಾವೂ ಕೂಡ ಸೌಜನ್ಯಾ ಪ್ರಕರಣದಲ್ಲಿ ಸಮಾನ ದುಃಖಿಗಳು ಎಂದು ತೋರಿಸುವ ಮೂಲಕ ಸದ್ಯ ರಾಜ್ಯಾದ್ಯಂತ ಹೆಚ್ಚಿರುವ ಸೌಜನ್ಯಾ ಪ್ರಕರಣದ ಕಾವಿಗೆ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಹೊರಟಿದೆ.

ಸೌಜನ್ಯಾ ನ್ಯಾಯಕ್ಕಾಗಿ ನಡೆದ ಕೂಗು ಇಂದು ನಿನ್ನೆಯದಲ್ಲ..!
ಸೌಜನ್ಯಾ ಕೊಲೆಯಾಗಿ 11 ವರ್ಷಗಳೇ ಕಳೆದು ಹೋಗಿದೆ‌. ಆ ಹೆಣ್ಣು ಮಗುವಿನ ಮರಣಾನಂತರ ಇಲ್ಲಿಯವರೆಗೆ ರಾಜ್ಯದಲ್ಲಿ ಮೂರು ಸರ್ಕಾರಗಳು ಅಧಿಕಾರ ನಡೆಸಿವೆ. ಬಿಜೆಪಿಯೂ ಕೂಡ ಐದು ವರ್ಷ ತನ್ನ ಅಧಿಕಾರಾವಧಿ ಪೂರೈಸಿದೆ. ಈ ಪ್ರಕರಣದ ಆರೋಪಿ ಸಂತೋಷ್ ರಾವ್ ಅಲ್ಲ ಎಂದು ಆತನ ಬಂಧನವಾದಾಗಿನಿಂದಲೂ ಸೌಜನ್ಯಾ ಪೋಷಕರು, ಹೋರಾಟಗಾರರು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಪ್ರಕರಣದ ತನಿಖೆ ಸರಿಯಾಗಿ ನಡೆದೇ ಇಲ್ಲ ಎಂದೂ ಹೋರಾಟಗಳೂ ನಡೆದಿವೆ. ಆಗೆಲ್ಲ ಈ ಬಿಜೆಪಿಯದು ಜಾಣ ಮೌನ. ಸದ್ಯ ಈ ಪ್ರಕರಣದ ಪರ ಹೋರಾಟ ಜೋರಾದ ಕೂಡಲೇ ತಾನೂ ಕೂಡ ಈ ಪ್ರಕರಣದಲ್ಲಿ ಜೊತೆಯಾಗಲು ಬಿಜೆಪಿ ನಿರ್ಧರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗೋದು ಸುಳ್ಳಂತೂ ಅಲ್ವೇ ಅಲ್ಲ..!

ಸಂಸದ ನಳಿನ್ ಹೇಳೋದೇನು?
ಅ.27 ರಂದು ಬಿಜೆಪಿಯಿಂದ ದ.ಕ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರನ್ನೊಳಗೊಂಡು ಪ್ರತಿಭಟನೆ ನಡೆಸುವುದಾಗಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

ಈ ಹೋರಾಟದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಪ್ರಮುಖರು ಭಾಗಿಯಾಗಲಿದ್ದು, ಎಸ್ ಡಿ ಎಂ ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಪೊಲೀಸ್ ತನಿಖೆ ಆಗಿದೆ. ಸಿಐಡಿ ಬಳಿಕ ಹೋರಾಟ ನಡೆದು ಸಿಬಿಐ ತನಿಖೆ ಕೂಡ ಆಗಿದೆ. ಕೊನೆಗೆ ಸಿಬಿಐ ಬಂಧಿತ ವ್ಯಕ್ತಿ ಆರೋಪಿ ಅಲ್ಲ ಅಂತ ಹೇಳಿದೆ. ಆವತ್ತು ಕೂಡ ಬಿಜೆಪಿ ಈ ವಿಚಾರದಲ್ಲಿ ಹೋರಾಟ ಮಾಡಿತ್ತು.

27 ರಂದು ಪ್ರತಿಭಟನೆ..!
ಇದೀಗ ಮತ್ತೆ ಬಿಜೆಪಿ ಇಡೀ ಪ್ರಕರಣದ ಮರು ತನಿಖೆಗೆ ಆಗ್ರಹಿಸುತ್ತದೆ. ಘಟನೆಯ ಬಳಿಕದ ಹೋರಾಟಗಳು, ಕುಟುಂಬದ ಆಗ್ರಹಗಳ ತನಿಖೆ ಆಗಬೇಕು. ಹಂತಕರ ಪತ್ತೆ ಮೂಲಕ ಕುಟುಂಬಕ್ಕೆ ನ್ಯಾಯ ಸಿಗಬೇಕು. ಬಿಜೆಪಿ ಪ್ರಕರಣದ ಮರು ತನಿಖೆಗೆ ಸಿಎಂಗೆ ಒತ್ತಾಯ ಮಾಡಲಿದೆ‌. ಹಾಗಾಗಿ ಅ. 27ರಂದು ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಆ ಬಳಿಕ ಸಿಎಂ ಮತ್ತು ರಾಜ್ಯಪಾಲರಿಗೆ ಮನವಿ ಕೊಡಲಿದ್ದೇವೆ.

ಅ.27 ರಂದು ದ.ಕ ಮತ್ತು ಉಡುಪಿ ಜಿಲ್ಲೆಯ ಕಾರ್ಯಕರ್ತರ ಸೇರಿಸಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಿದ್ದು, ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ಬೃಹತ್ ಹೋರಾಟ ನಡೆಯಲಿದೆ. ಇದರಲ್ಲಿ ಎರಡೂ ಜಿಲ್ಲೆಗಳ ಶಾಸಕರು, ನಾಯಕರು ಭಾಗಿಯಾಗಲಿದ್ದಾರೆ. ಪ್ರತಿಭಟನೆಯ ಮರು ದಿನ ಶಾಸಕರ ನಿಯೋಗ ಸಿಎಂ ಭೇಟಿಯಾಗಲಿದೆ. ಸೌಜನ್ಯ ಕೇಸ್ ನಲ್ಲಿ ಸಿಬಿಐಗೆ ಹೋದರೂ ಆರೋಪಿಗಳು ಯಾರು ಅನ್ನೋದು ಆಗಿಲ್ಲ. ಇದರಲ್ಲಿ ಯಾರನ್ನೂ ಟಾರ್ಗೆಟ್ ಮಾಡುವ ವಿಷಯ ಇಲ್ಲ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಉದ್ದೇಶ‌. ಬೇರೆ ಬೇರೆ ರೀತಿಯ ಹೋರಾಟಗಾರರು ಬೇರೆ ಹೋರಾಟ ಮಾಡಬಹುದು. ಆದರೆ‌ ನಮ್ಮ ನಿರ್ಧಾರ ಸ್ಪಷ್ಟ ಇದೆ ಎಂದು ಕಟೀಲ್ ಹೇಳಿದ್ದಾರೆ.

ಹಠಾತ್ ಸೌಜನ್ಯಾ ಪ್ರಕರಣಕ್ಕೆ ಧುಮುಕಿತೇಕೆ ಬಿಜೆಪಿ?
ಸದ್ಯ ಸೌಜನ್ಯಾ ಪ್ರಕರಣದ ಹೋರಾಟದ ಕಾವು ಜೋರಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಮೊನ್ನೆ ಸುಳ್ಯಕ್ಕೆ ಹೋದಾಗಲೂ ಜನಸಾಗರ ಕಂಡುಬಂದಿತ್ತು. ಬಿಜೆಪಿಗೆ ಸೆಡ್ಡು ಹೊಡೆದು ಬೆಳೆಯುತ್ತಿರುವ ಪುತ್ತಿಲ ಪರಿವಾರ ಕೂಡ ಸೌಜನ್ಯಾ ಪ್ರಕರಣದ ನ್ಯಾಯಕ್ಕಾಗಿ ಪ್ರತಿಭಟನೆಯ ಕರೆ ಕೊಟ್ಟಿದೆ. ಸದ್ಯ ಕರಾವಳಿಯಲ್ಲಿ ಸೌಜನ್ಯಾ ಪ್ರಕರಣದ ಬಿಸಿ ಜೋರಾಗಿರುವಂತೆ ಉಜಿರೆಯಲ್ಲಿ ನಡೆದ ಅಖಿಲ ಭಾರತ ಧರ್ಮಸ್ಥಳ ಅಭಿಮಾನಿಗಳ ಸಂಘದ ಹಕ್ಕೊತ್ತಾಯ ಸಭೆಯಲ್ಲಿ ಬಿಜೆಪಿಯ ಮುಖಂಡರು ಗುರುತಿಸಿಕೊಂಡಿರುವುದು ಬಿಜೆಪಿ ಕಾರ್ಯಕರ್ತರಿಗೇ ಸಿಟ್ಟು ತರಿಸಿದೆ. ಅದರಲ್ಲೂ ಸಾರ್ವಜನಿಕರು ಆರೋಪಿಗಳೆಂದು ಹೇಳುವವರ ಜೊತೆಯೇ ಬಿಜೆಪಿಯ ಸಖ್ಯ ಬೆಳೆಸಿರುವುದು ತಪ್ಪು ಎಂಬ ಕೂಗಿನ ಬೆನ್ನಲ್ಲೇ ಈ ಪ್ರತಿಭಟನೆಯ ಘೋಷಣೆ ಯಾವ ಪುರುಷಾರ್ಥಕ್ಕೆ ಎಂಬುದು ಜನಸಾಮಾನ್ಯರಿಗೂ ಅರ್ಥವಾಗದ ಸಂಗತಿಯೇನಲ್ಲ..!

ಸುಳ್ಯ ಜನಸಾಗರ
ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ
ತಿಮರೋಡಿ ಪ್ರಮೋದ್ ಮುತಾಲಿಕ್ ಭೇಟಿ

ಮರಳಿ ಖದರ್ ಗಳಿಸುತ್ತಿದ್ದಾರೆ ತಿಮರೋಡಿ, ಚಿಗುರುತ್ತಿದೆ ಪುತ್ತಿಲ ಪರಿವಾರ..!
ಹೇಳಿ ಕೇಳಿ ಸೌಜನ್ಯಾ ಪ್ರಕರಣದಲ್ಲಿ ನ್ಯಾಯಕ್ಕಾಗಿ 11 ವರ್ಷಗಳಿಂದ ಸೌಜನ್ಯಾ ಪೋಷಕರ ಜೊತೆ ಇರುವವರು ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತ್ರ ಎಂಬುದು ಯಾರೇ ಆದರೂ ಒಪ್ಪಿಕೊಳ್ಳಬೇಕಾದ ಸತ್ಯ. ನ್ಯಾಯಕ್ಕಾಗಿ ಎದುರು ನೋಡುತ್ತಾ ತೀರ್ಪಿಗಾಗಿ ಕಾಯುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ ಈ ಪ್ರಕರಣದ ತೀರ್ಪು ಹೊರಬೀಳುತ್ತಲೇ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಅವರು ಹಾಗೂ ಅವರ ಬೆಂಬಲಿಗರು ನ್ಯಾಯಕ್ಕಾಗಿ ಮತ್ತೆ ಪ್ರತಿಭಟನೆಯ ಮೊರೆ ಹೋಗಿದ್ದು ಅವರಿಗೆ ಈ ಬಾರಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಅತ್ತ ಪುತ್ತಿಲ ಪರಿವಾರವೂ ಸೌಜನ್ಯ ಪ್ರಕರಣಕ್ಕೆ ಕಾಲಿಟ್ಟಿದ್ದು, ಅವರಿಗೂ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಹೀಗೆ ಬಿಜೆಪಿ ಹೊರತಾದ ನಾಯಕರು ತಮ್ಮ ಚಾರ್ಮ್ ಹೆಚ್ಚಿಸಿಕೊಳ್ಳುತ್ತಿದ್ದು ಇದು‌ ಹೀಗೆಯೇ ಮುಂದುವರಿದರೆ ಅದರ ಡ್ಯಾಮೇಜ್ ಆಗೋದು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ. ಹಾಗಾಗಿ ತಮ್ಮ ಹಿಡಿತ ಕರಾವಳಿಯಲ್ಲಿ ಕೈಜಾರದಂತೆ ತಡೆಯಲು ಬಿಜೆಪಿ ಪ್ರತಿಭಟನೆಯ ನೆಪ ಒಡ್ಡಿ ತಾನೂ ತನ್ನ ಇರುವಿಕೆಯನ್ನು ಗುರುತಿಸುವ ಇಂಗಿತ ತೋರಿದೆ.

ಹಾಗಾದರೆ ಬಿಜೆಪಿ ಪ್ರತಿಭಟಿಸೋದು ತಪ್ಪಾ?
ಖಂಡಿತವಾಗಿಯೂ ತಪ್ಪಲ್ಲ‌‌‌‌‌. ಇದು ಸೌಜನ್ಯಾ ಪ್ರಕರಣದಲ್ಲಿ ಉತ್ತಮ ಬೆಳವಣಿಗೆ. ಆದರೆ ನ್ಯಾಯ ಕೊಡಿಸಲು ಬಿಜೆಪಿ ತನ್ನ ಶಕ್ತಿ ಮೀರಿ ಶ್ರಮಿಸುತ್ತಾ? ಈ ಪ್ರಕರಣದ ಸಾಕ್ಷಿ ನಾಶ ಮಾಡಿದ ಅಧಿಕಾರಿಗಳು ಅಥವಾ ವೈದ್ಯರ ತನಿಖೆಗೆ ಶೇಕಡಾ ನೂರರಷ್ಟು ಶ್ರಮ ವಹಿಸುತ್ತಾ? ನ್ಯಾಯ ಏನೇ ಆಗಿರಲಿ, ಅದಕ್ಕೆ ನಾವು ಬದ್ಧ, ಹಿಂಜರಿಯುವ ಮಾತೇ ಇಲ್ಲ ಎಂದು ಬಿಜೆಪಿ ನಿರ್ಧರಿಸಿ ಕೇಂದ್ರ ಸರ್ಕಾರದ ಬಾಗಿಲು ಬಡಿದಾಗ ಮಾತ್ರ ಈ ಪ್ರಕರಣದಲ್ಲಿ ಖಂಡಿತ ನ್ಯಾಯ ಸಿಕ್ಕೇ ಸಿಗುತ್ತದೆ‌.

ಆಶಾಭಾವನೆ ಹುಸಿಯಾಗದಿರಲಿ…! ಸೌಜನ್ಯಾ ಸಾವಿಗೆ ನೈಜ ನ್ಯಾಯ ಸಿಗಲಿ… ಅತ್ಯಾಚಾರಿಗಳ, ಅವರನ್ನು ರಕ್ಷಿಸಿದವರ ಹುಟ್ಟಡಗಲಿ‌‌..!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *