ತೊಟ್ಟಿಲನ್ನು ತೂಗುವ ಕೈ ಸ್ಟೇರಿಂಗ್ ಅನ್ನೂ ತಿರುಗಿಸಬಲ್ಲದು – ದೇಶದ ಮೊದಲ ಆ್ಯಂಬುಲೆನ್ಸ್ ಚಾಲಕಿ ವೀರಲಕ್ಷ್ಮೀಯ ಯಶೋಗಾಥೆ ಇದು..

ತೊಟ್ಟಿಲನ್ನು ತೂಗುವ ಕೈ ಸ್ಟೇರಿಂಗ್ ಅನ್ನೂ ತಿರುಗಿಸಬಲ್ಲದು – ದೇಶದ ಮೊದಲ ಆ್ಯಂಬುಲೆನ್ಸ್ ಚಾಲಕಿ ವೀರಲಕ್ಷ್ಮೀಯ ಯಶೋಗಾಥೆ ಇದು..

ನ್ಯೂಸ್ ಆ್ಯರೋ‌ : ಮಹಿಳೆ ತಾನು ಅಬಲೆಯಲ್ಲ ಸಬಲೆ ಎನ್ನುವುದನ್ನು ಸಾಬೀತು ಪಡಿಸಿ ಅದೆಷ್ಟೋ ಕಾಲವಾಯಿತು. ಇಂದು ಆಕೆ ಪುರುಷರಿಗೆ ಸರಿ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸುತ್ತಿದ್ದಾಳೆ. ತೀರಾ ಇತ್ತೀಚಿನವರೆಗೆ ಪುರುಷರಿಗೆ ಮಾತ್ರ ಎಂದು ಅಘೋಷಿತವಾಗಿ ತೀರ್ಮಾನವಾಗಿದ್ದ ರಂಗಕ್ಕೂ ಮಹಿಳೆ ಕಾಲಿಟ್ಟಾಗಿದೆ. ಟ್ರಕ್ ಡ್ರೈವಿಂಗ್ ನಲ್ಲೂ ಮಹಿಳೆ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದು ಆ್ಯಂಬುಲೆನ್ಸ್ ಚಾಲಕಿಯಾಗಿಯೂ ಗಮನ ಸೆಳೆದಿದ್ದಾಳೆ. ನಾವು ಇವತ್ತು ನಿಮಗೆ 2020ರಲ್ಲಿಯೇ ಭಾರತದ ಮೊದಲ ಆ್ಯಂಬುಲೆನ್ಸ್ ಚಾಲಕಿ (India’s First Female Ambulance Driver) ಎಂಬ ಹೆಗ್ಗಳಿಕೆಗೆ ಪಾತ್ರರಾದ ತಮಿಳುನಾಡಿನ ಎಂ.ವೀರಲಕ್ಷ್ಮೀ (Veeralakshmi) ಬಗ್ಗೆ ಪರಿಚಯ ಮಾಡಿಕೊಡುತ್ತೇವೆ.

ಡ್ರೈವಿಂಗ್ ಎಂಬ ಕನಸು

ತಮಿಳುನಾಡಿನ ಥೇನಿಯಲ್ಲಿ ಜನಿಸಿದ ವೀರಲಕ್ಷ್ಮೀ ಅವರಿಗೆ ಡ್ರೈವಿಂಗ್ ಎನ್ನುವುದು ಬಾಲ್ಯದ ಕನಸಾಗಿತ್ತು. ಮದುವೆಯಾದ ಬಳಿಕ ಅವರು ದಶಕಗಳ ಹಿಂದೆ ಪತಿಯ ಜೊತೆಗೆ ಚೆನ್ನೈಗೆ ಬಂದು ವಾಸಿಸತೊಡಗಿದರು. ಡ್ರೈವರ್ ವೃತ್ತಿಯಲ್ಲಿದ್ದ ಪತಿಯ ಜೊತೆಗೆ ಸಮಯ ಸಿಕ್ಕಾಗಲೆಲ್ಲ ಹೋಗುತ್ತಿದ್ದ ವೀರಲಕ್ಷ್ಮೀ ವಾಹನ ಚಾಲನೆಯ ತಂತ್ರಗಳನ್ನು ಗಮನಿಸುತ್ತಿದ್ದರಂತೆ. ”ವಾಹನ ಚಾಲನೆಯ ಸೂಕ್ಷ್ಮತೆ ಜೊತೆಗೆ ದುರಸ್ತಿಯನ್ನೂ ಪತಿಯ ಬಳಿಯಿಂದಲೇ ಕಲಿತೆ” ಎಂದು 30 ವರ್ಷದ ವೀರಲಕ್ಷ್ಮೀ ಹೇಳುತ್ತಾರೆ.

ಬದುಕು ಬದಲಿಸಿದ ANEW

ಅಣ್ಣಾನಗರ್ ನಲ್ಲಿರುವ ವುಮೇನ್ಸ್ ವೆಲ್ ಫೇರ್ ಅಸೋಸಿಯೇಷನ್ ANEW-ಎನ್ಯೂ ಮಹಿಳೆಯರಿಗೆ ತರಬೇತಿ ನೀಡಿ ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತದೆ. ಕೆಲವು ವರ್ಷಗಳ ಹಿಂದೆ ಇಲ್ಲಿಗೆ ಸೇರಿದ ವೀರಲಕ್ಷ್ಮೀ ಡ್ರೈವಿಂಗ್ ತರಗತಿಯನ್ನು ಆಯ್ದುಕೊಂಡರು. ”ಪತಿಯ ಜೊತೆ ಆಗಾಗ ಹೊರಗೆ ಹೋಗಿ ಡ್ರೈವಿಂಗ್ ಅನ್ನು ಗಮನಿಸುತ್ತಿದ್ದುದರಿಂದ ಮತ್ತು ನನ್ನ ಬಾಲ್ಯದ ಕನಸು ಇದೇ ಆಗಿದ್ದರಿಂದ ಆತ್ಮವಿಶ್ವಾಸದಿಂದಲೇ ಡ್ರೈವಿಂಗ್ ಕಲಿತೆ” ಎನ್ನುತ್ತಾರೆ ವೀರಲಕ್ಷ್ಮೀ.

ಆರಂಭದ ದಿನಗಳು…

ವೀರಲಕ್ಷ್ಮೀ ಅವರ ನೈಪುಣ್ಯತೆ ಮತ್ತು ವಾಹನ ಚಲಾಯಿಸುವಾಗ ತೋರುವ ಆತ್ಮವಿಶ್ವಾಸ ಕಂಡು ತರಬೇತುದಾರರಾದ ರಮೇಶ್ ಕುಮಾರ್ ಮತ್ತು ಮುತ್ತು ಕುಮಾರ್ ಮೆಚ್ಚುಗೆ ಸೂಚಿಸಿದ್ದರಂತೆ. ಬಳಿಕ ಅವರ ಸಲಹೆಯಂತೆ ವೀರಲಕ್ಷ್ಮೀ ವಾಹನ ಬಾಡಿಗೆ ಪಡೆದು ಓಡಿಸತೊಡಗಿದರು. ಹೀಗೆ ವೃತ್ತಿಪರ ಚಾಲಕಿಯಾಗಿ ಅವರು ಸುಮಾರು ಮೂರು ವರ್ಷ ಗ್ರಾಹಕರ ವಿಶ್ವಾಸ ಗಳಿಸಿದರು.

ಗ್ರಾಹಕರ ಸುರಕ್ಷತೆಗೆ ಆದ್ಯತೆ

”ಇದು ಬಹಳ ಮುಖ್ಯ” ಎನ್ನುತ್ತಾರೆ ವೀರಲಕ್ಷ್ಮೀ. ”ಪುರುಷ ಚಾಲಕರೂ ತೆರಳಲು ಹಿಂದೇಟು ಹಾಕುವ ಕೆಲವು ಕತ್ತಲೆ ತುಂಬಿದ ಪ್ರದೇಶ, ಕೊಳಕು ಏರಿಯಾಗಳಿಗೂ ತೆರಳಿ ಗ್ರಾಹಕರಿಗೆ ಸೇವೆ ನೀಡಿದ್ದೇನೆ. ಅವರು ಸುರಕ್ಷಿತವಾಗಿ ತಮ್ಮ ಮನೆಗೆ ತಲುಪಿದರು ಎನ್ನುವುದು ಖಚಿತವಾದ ಬಳಿಕವಷ್ಟೇ ನಾನು ಅಲ್ಲಿಂದ ತೆರಳುತ್ತಿದ್ದುದು. ಹೀಗಾಗಿಯೇ ಅನೇಕರು ನನ್ನ ಮೇಲೆ ವಿಶ್ವಾಸ ಇರಿಸಿದ್ದರು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು. ಸರಕಾರಿ ಕೆಲಸ ದೊರೆಯಲು ಸರ್ಟಿಫಿಕೆಟ್ ಅಗತ್ಯ ಎನ್ನುವುದನ್ನು ಮನಗಂಡ ಅವರು ಚಿದಂಬರಂನ ಅಣ್ಣಾಮಲೈ ವಿವಿಯಲ್ಲಿ ಆಟೋಮೊಬೈಲ್ ಟೆಕ್ನಾಲಜಿಯಲ್ಲಿ 2018-19ರ ಬ್ಯಾಚ್ ನಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿದರು.

ದೇಶದ ಮೊದಲ ಆ್ಯಂಬುಲೆನ್ಸ್ ಚಾಲಕಿಯಾದ ಬಗೆ ಹೇಗೆ?

2020ರಲ್ಲಿ ಲಾಕ್ ಡೌನ್ ಜಾರಿಯಾಯಿತು. ಈ ಸಮಯದಲ್ಲಿ ಮನೆಯಲ್ಲಿಯೇ ಇದ್ದ ವೀರಲಕ್ಷ್ಮೀ ಅವರಿಗೆ ತಮ್ಮ ವೃತ್ತಿ ಪರ ಕೌಶಲ್ಯವನ್ನು ಕೊರೊನಾ ವಾರಿಯರ್ಸ್ ಗಳಿಗಾಗಿ ವ್ಯಯಿಸಬೇಕು ಎನಿಸಿತು. ಹೀಗೆ ಅವರು ಜೂನ್ ನಲ್ಲಿ ಜಿವಿಕೆಯ 108 ಆ್ಯಂಬುಲೆನ್ಸ್ ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಿದರು.

ಆರಂಭದಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದು ಪುರುಷರಿಗಿರುವ ಉದ್ಯೋಗ, ನಿನಗೆ ಇದರ ಉಸಾಬರಿ ಬೇಡ ಎಂದಿದ್ದರು. ಆದರೆ ವೀರಲಕ್ಷ್ಮೀಯ ನಿರ್ಧಾರ ಅಚಲವಾಗಿತ್ತು. ಅಧಿಕಾರಿಗಳು ಕೂಡ ಇಂತಹ ಹುದ್ದೆಗೆ ಮಹಿಳೆಯಿಂದ ಸ್ವೀಕರಿಸಿದ ಮೊದಲ ಅರ್ಜಿ ಅದಾಗಿತ್ತು ಎಂದಿದ್ದರು. ಅವರು ಅನುಮಾನಿಸಿದಾಗ ವೀರಲಕ್ಷ್ಮೀ, ತನ್ನ ಡ್ರೈವಿಂಗ್ ಅನುಭವವನ್ನು ಮನನ ಮಾಡುವ ಜೊತೆಗೆ ಬೇಕಾದ ಎಲ್ಲಾ ಟೆಸ್ಟ್ ಮಾಡಿಯೇ ಆಯ್ಕೆ ಮಾಡುವಂತೆ ತಿಳಿಸಿದರು.

ಅದರಂತೆ ಅವರಿಗಾಗಿ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ವೀರಲಕ್ಷ್ಮೀಗೆ ಪೂರ್ಣ ಅಂಕ ಲಭಿಸಿತು. ಬಳಿಕ ಅವರಿಗೆ ಆ್ಯಂಬುಲೆನ್ಸ್ ಚಾಲನೆಯ ತರಬೇತಿ ನೀಡಲಾಯಿತು. ”ಕ್ಯಾಬ್ ಚಾಲನೆಯ ವೇಳೆ ನಾನು ಡ್ರೈವಿಂಗ್ ಗೆ ಸಂಬಂಧಿಸಿದ ಸೆಮಿನಾರ್ ಗಳಲ್ಲಿ ಭಾಗವಹಿಸುತ್ತಿದ್ದೆ. ಇದರಿಂದ ಪ್ರಥಮ ಚಿಕಿತ್ಸೆ, ಅಗ್ನಿ ನಿರೋಧಕ ಕ್ರಮಗಳ ಬಗ್ಗೆ ಮಾಹಿತಿ ಇತ್ತು. ಇದು ತರಬೇತಿ ವೇಳೆ ಪ್ರಯೋಜನಕ್ಕೆ ಬಂತು” ಎಂದು ಅವರು ತಿಳಿಸುತ್ತಾರೆ.

ಹೆಮ್ಮೆಯ ಕ್ಷಣ

”ತರಬೇತಿ ಕಳೆದು ಎರಡು ತಿಂಗಳ ಬಳಿಕ ಉದ್ಯೋಗಕ್ಕೆ ಸೇರುವ ಕುರಿತು ಕರೆ ಬಂದಿತ್ತು. ಮೊದಲ ಬಾರಿ ಮಹಿಳಾ ಡ್ರೈವರ್ ಅನ್ನು ನೇಮಕ ಮಾಡುವ ಕುರಿತು ತಮಗೂ ಹೆಮ್ಮೆ ಇದೆ ಎಂದು ಅಧಿಕಾರಿಗಳು ಹೇಳಿದ್ದರು. ಆ. 31ರಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅಧಿಕೃತವಾಗಿ ನನ್ನ ಹೆಸರು ಘೋಷಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಸಚಿವರು ನನ್ನ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಆ್ಯಂಬುಲೆನ್ಸ್ ಚಾಲನೆಗೆ ಉಪಮುಖ್ಯಮಂತ್ರಿ ಹಸಿರು ನಿಶಾನೆ ತೋರಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ” ಎಂದು ಹೇಳುವಾಗ ವೀರಲಕ್ಷ್ಮೀ ಮುಖದಲ್ಲಿ ಸಾರ್ಥಕತೆಯ ಮಿಂಚು ಹೊಳೆಯುತಿತ್ತು.

ಆತ್ಮ ತೃಪ್ತಿ ತಂದ ಉದ್ಯೋಗ

ಆರಂಭದಲ್ಲಿ ವೀರಲಕ್ಷ್ಮೀ ಅವರನ್ನು ಅವಡಿಯ ಸರಕಾರಿ ಆಸ್ಪತ್ರೆಗೆ ನಿಯೋಜಿಸಲಾಗಿತ್ತು. ”ಬೆಳಗ್ಗೆ 8ರಿಂದ ಸಂಜೆ 8ರ ವರೆಗೆ ಕೆಲಸದ ಅವಧಿ. ಕ್ಯಾಬ್ ಚಾಲನೆ ಕೆಲಕ್ಕೆ ಹೋಲಿಸಿದರೆ ಇಲ್ಲಿ ಕಡಿಮೆ ಸಂಬಳ ಬರುತ್ತದೆ. ಆದರೆ ಇಲ್ಲಿ ಸಿಗುವ ಆತ್ಮ ತೃಪ್ತಿ ಅದಕ್ಕೂ ಮೇಲು. ಅದುವರೆಗೆ ಭೇಟಿಯಾಗದ ರೋಗಿಗಳ ಸಂಬಂಧಿಕರು ಕೈಯನ್ನು ಹಿಡಿದು ಸಮಯಕ್ಕೆ ಸರಿಯಾಗಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸಿದ್ದಕ್ಕೆ ಧನ್ಯವಾದ ಹೇಳುವಾಗ ಅಥವಾ ಹಿರಿಯರು ಆಶೀರ್ವಾದ ಮಾಡುವಾಗ ಮನಸ್ಸಿಗೆ ತೃಪ್ತಿಯಾಗುತ್ತದೆ. ಅವರ ಜೀವನದಲ್ಲಿ ಬದಲಾವಣೆಗೆ ಕಾರಣವಾದೆ ಎನ್ನುವ ಸಂತೋಷ ಲಭಿಸುತ್ತದೆ” ಎಂದು ವೀರಲಕ್ಷ್ಮೀ ಸಂತೃಪ್ತ ಭಾವದಿಂದ ನುಡಿಯುತ್ತಾರೆ.

ಮಹಿಳೆಯರಿಗೆ ಕಿವಿಮಾತು

”ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇದ್ದರೆ ಮಹಿಳೆಗೆ ಯಾವುದೂ ಅಡ್ಡಿಯಾಗಲಾರದು. ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ನಿಮಗೆ ಬೇಕಾಗಿರುವುದು ಅಭ್ಯಾಸ ಮತ್ತು ಉತ್ತಮ ಮಾರ್ಗದರ್ಶನ ಮಾತ್ರ” ಎಂದು ವೀರಲಕ್ಷ್ಮೀ ಕಿವಿಮಾತು ಹೇಳುತ್ತಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *