‘ಪಠಾಣ್’ ಗೆಲುವಿನ ನೆನಪಿಗೆ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಕಿಂಗ್ ಖಾನ್ -ಈ ಐಶಾರಾಮಿ ಕಾರಿನ ಬೆಲೆ ಎಷ್ಟು ಕೋಟಿ ಗೊತ್ತಾ?
- ಮನರಂಜನೆ
- March 28, 2023
- No Comment
- 151
ನ್ಯೂಸ್ ಆ್ಯರೋ : ಬಿಡುಗಡೆಗೂ ಮುನ್ನ ಸಾಕಷ್ಟು ಹೋರಾಟ, ಪ್ರತಿಭಟನೆಗಳನ್ನು ಎದುರಿಸಿದ ಬಾಲಿವುಡ್ನ ‘ಪಠಾಣ್’ ಬಿಡುಗಡೆಯ ನಂತರ ನಿರ್ಮಿಸಿದ್ದು ಮಾತ್ರ ಇತಿಹಾಸವನ್ನು…!! ಶಾರುಖ್ ಖಾನ್ ನಟನೆಯ ಈ ಚಿತ್ರ ಒಟ್ಟಾರೆಯಾಗಿ 1050 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ‘ಜೀರೋ’ ಸಿನಿಮಾದಿಂದ ಸೋಲಿನ ಪಾತಾಳಕ್ಕೆ ಬಿದ್ದಿದ್ದ ಕಿಂಗ್ ಖಾನ್ ಅವರಿಗೆ ಮತ್ತೆ ಜೀವಕಳೆ ತಂದಿದ್ದು ‘ಪಠಾಣ್’ ಸಿನಿಮಾ.
ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದ ಈ ಸಿನಿಮಾ ಬಿಡುಗಡೆಯಾಗುವುದೇ ಅನುಮಾನ ಎಂಬಂತಿತ್ತು. ಆದರೆ ಬಿಡುಗಡೆಯಾದ ಮೊದಲ ದಿನವೇ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಜಗತ್ತಿನೆಲ್ಲೆಡೆ ಮೋಡಿಯನ್ನೇ ಮಾಡಿತು. ಭರ್ಜರಿ ಓಪನಿಂಗ್ ಪಡೆದುಕೊಂಡ ‘ಪಠಾಣ್’ ಹಣದ ಹೊಳೆಯನ್ನೇ ಹರಿಸಿತು. ವರ್ಷಗಳ ನಂತರ ತೆರೆಯ ಮೇಲೆ ರಾರಾಜಿಸಿದ ಶಾರುಖ್ ಖಾನ್ ಅವರನ್ನು ಕಂಡು ಅಭಿಮಾನಿಗಳು ಫಿದಾ ಆದರು.
ಸದ್ಯ, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಐಶಾರಾಮಿ ಕಾರೊಂದರಲ್ಲಿ ಸುತ್ತಾಡುತ್ತಿದ್ದಾರೆ. ಮೂಲಗಳ ಪ್ರಕಾರ ಶಾರುಖ್ ‘ಪಠಾಣ್’ ಗೆಲುವಿನ ನೆನಪಿಗಾಗಿ ವಿಶ್ವದ ಐಶಾರಾಮಿ ಕಾರುಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಖರೀದಿಸಿದ್ದಾರಂತೆ. ಈ ಕಾರಿನ ಬೆಲೆ ಬರೋಬ್ಬರಿ 10 ಕೋಟಿ. ಬಿಳಿ ಬಣ್ಣದ ಈ ರೋಲ್ಸ್ ರಾಯ್ ಶಾರುಖ್ ಮನೆ ಮನ್ನತ್ ಮುಂದೆ ರೌಂಡ್ ಹೊಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಶಾರುಖ್ 5 ಕೋಟಿ ಬೆಲೆಯ ಐಶಾರಾಮಿ ವಾಚ್ ತೊಟ್ಟು ಗಮನ ಸೆಳೆದಿದ್ದರು.
ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳ ಹೊಡೆತದಿಂದ ಮೂಲೆಗುಂಪಾಗಿದ್ದ ಬಾಲಿವುಡ್ಗೆ ಪಠಾಣ್ ಚಿತ್ರ ವರ್ಷಾರಂಭದಲ್ಲೇ ದೊಡ್ಡ ಹಿಟ್ ಕೊಟ್ಟಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ 1000 ಸಾವಿರ ಕೋಟಿ ಗಳಿಕೆ ಕಾಣುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ದೀಪಿಕಾ ಪಡುಕೋಣೆ ಚಿತ್ರದಲ್ಲಿ ನಾಯಕಿಯಾಗಿದ್ದರೆ, ನಟ ಜಾನ್ ಅಬ್ರಹಾಂ ಖಡಕ್ ವಿಲನ್ ಆಗಿ ಮಿಂಚಿದ್ದಾರೆ. ಭಯೋತ್ಪಾದಕರನ್ನು ತಡೆದು ದೇಶ ರಕ್ಷಿಸುವ ಸೈನಿಕನಾಗಿ ಶಾರುಖ್ ನೋಡುಗರ ಮನ ಗೆದ್ದಿದ್ದಾರೆ.
ಇದೀಗ ಪಠಾಣ್ ಚಿತ್ರ ಅಮೆಜಾನ್ ಪ್ರೈಮ್ಗೆ ಲಗ್ಗೆ ಇಟ್ಟಿದ್ದು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಶಾರುಖ್ ಮುಂದೆ ತಮಿಳು ನಿರ್ದೇಶಕ ಅಟ್ಲಿ ಕುಮಾರ್ ಅವರ ‘ಜವಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಯನ್ ತಾರಾ ನಾಯಕಿಯಾಗಿದ್ದು, ವಿಜಯ್ ಸೇತುಪತಿ ಸೇರಿದಂತೆ ಪ್ರಮುಖ ನಟರ ಸಮಾಗಮವಾಗಲಿದೆ. ಸಂಜಯ್ ದತ್ ಹಾಗೂ ದಳಪತಿ ವಿಜಯ್ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ. ಇದರ ನಂತರ ‘ಡಂಕಿ’ ಚಿತ್ರದಲ್ಲಿ ಕಿಂಗ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಲ್ಮಾನ್ ಖಾನ್ ನಟನೆಯ ‘ಟೈಗರ್3’ ಚಿತ್ರದಲ್ಲೂ ಶಾರುಖ್ ನಟಿಸುವುದು ಕನ್ಫರ್ಮ್ ಆಗಿದೆ.