ಕೊನೆಗೂ ವಿರಾಟ್ ಬ್ಯಾಟ್ ನಿಂದ ಸಿಡಿದ ಟೆಸ್ಟ್ ಶತಕ – 41 ತಿಂಗಳ ಶತಕದ ಬರ ನೀಗಿದ ‘ಕಿಂಗ್ ಕೊಹ್ಲಿ’
- ಕ್ರೀಡಾ ಸುದ್ದಿ
- March 12, 2023
- No Comment
- 504
ನ್ಯೂಸ್ ಆ್ಯರೋ : ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಶತಕ ಸಿಡಿಯದೇ ಅಭಿಮಾನಿಗಳು ಹಲವು ವರ್ಷಗಳಿಂದಲೇ ನಿರಾಸೆ ಅನುಭವಿಸಿದ್ದರು. ಇತ್ತೀಚೆಗೆ ಏಕದಿನ ಮಾದರಿಯಲ್ಲಿ ಶತಕ ಸಿಡಿಸಿದ್ದ ವಿರಾಟ್, ಟಿ ಟ್ವೆಂಟಿಯಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಟೆಸ್ಟ್ ನಲ್ಲಿ 41 ತಿಂಗಳುಗಳಿಂದೀಚೆಗೆ ಶತಕ ಬಂದಿರಲಿಲ್ಲ.
ಇದೀಗ ಅಹ್ಮದಾಬಾದ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಭರ್ಜರಿ ಶತಕ ಸಿಡಿದಿದ್ದು ಟೆಸ್ಟ್ ಮಾದರಿಯಲ್ಲಿ 28ನೇ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶತಕಕ್ಕಾಗಿ 240 ಕ್ಕೂ ಹೆಚ್ಚು ಎಸೆತ ತೆಗೆದುಕೊಂಡ ವಿರಾಟ್ ತಾಳ್ಮೆಯ ಮೂರ್ತಿಯಾಗಿ ಕಂಗೊಳಿಸಿದರು. ಶತಕ ಗಳಿಸುತ್ತಲೇ ಹೆಲ್ಮೆಟ್ ತೆಗೆದು ಬ್ಯಾಟ್ ಜೊತೆ ಕೆಳಗಿಟ್ಟ ವಿರಾಟ್ ಕತ್ತಿನ ಚೈನ್ ನಲ್ಲಿದ್ದ ಉಂಗುರಕ್ಕೆ ಮುತ್ತಿಕ್ಕಿದರು.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಬ್ಯಾಟ್ನಿಂದ ನಿರೀಕ್ಷಿತ ಪ್ರಮಾಣದ ರನ್ ಹರಿದು ಬಂದಿರಲಿಲ್ಲ. ಹೀಗಾಗಿ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೆ ಅಹ್ಮದಾಬಾದ್ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಮ್ಮ ಶತಕವನ್ನು ಪೂರ್ತಿಗೊಳಿಸಿದ್ದು ಸುಮಾರು ಮೂರು ವರ್ಷ ನಾಲ್ಕು ತಿಂಗಳ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ಮಾದರಿಯಲ್ಲಿ ಶತಕ ಸಿಡಿಸಿದಂತಾಗಿದೆ.
ಅಂದ ಹಾಗೆ ವಿರಾಟ್ ಕೊಹ್ಲಿ ಇದಕ್ಕೂ ಮುನ್ನ ಕೊನೆಯ ಬಾರಿಗೆ ಟೆಸ್ಟ್ನಲ್ಲಿ ಶತಕ ಸಿಡಿಸಿದ್ದು 2019ರ ನವೆಂಬರ್ ತಿಂಗಳಿನಲ್ಲಿ. ಅಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದ್ದರು. ಅದಾದ ಬಳಿಕ ಸುದೀರ್ಘ ಕಾಲ ಫಾರ್ಮ್ ಕಳೆದುಕೊಂಡಿದ್ದ ಟೀಮ್ ಇಂಡಿಯಾದ ಅನುಭವಿ ಆಟಗಾರ ಕಳೆದ ವರ್ಷ ವೈಟ್ಬಾಲ್ ಮಾದರಿಯಲ್ಲಿ ಫಾರ್ಮ್ಗೆ ಮರಳಿದ್ದರು. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿದಿರಲಿಲ್ಲ. ಇದೀಗ ಆ ಕೊರತೆಯನ್ನು ನೀಗಿಸಿಕೊಂಡಿದ್ದಾರೆ.