
ಎಸ್ಟೇಟ್ ಮಾಲಕನಿಂದ ಕಾರ್ಮಿಕರಿಗೆ ಭರ್ಜರಿ ದೀಪಾವಳಿ ಗಿಫ್ಟ್ – ತಲಾ 2 ಲಕ್ಷ ಮೌಲ್ಯದ ಬೈಕ್ ಉಡುಗೊರೆ : ಏನಿದು ವೈರಲ್ ನ್ಯೂಸ್?
- ವೈರಲ್ ನ್ಯೂಸ್
- November 4, 2023
- No Comment
- 51
ನ್ಯೂಸ್ ಆ್ಯರೋ : ದೀಪಾವಳಿ ಸಮೀಪಿಸುತ್ತಿದ್ದಂತೆ ನೀಲಗಿರಿಯ ಎಸ್ಟೇಟ್ ಮಾಲಕರೊಬ್ಬರು ತಮ್ಮ ಉದ್ಯೋಗಿಗಳಿಗೆ ತಾವು ಇಷ್ಟ ಪಡುವ ದ್ವಿಚಕ್ರ ವಾಹನ, ಎಲ್‌ಸಿಡಿ ಟಿವಿ ಮತ್ತು ನಗದು ಬೋನಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ತಿರುಪ್ಪೂರಿನ ವಂಜಿಪಾಳ್ಯಂ ಮೂಲದ ಪಿ. ಶಿವಕುಮಾರ್ (42) ಅವರು 190 ಎಕರೆ ಟೀ ಎಸ್ಟೇಟ್ ಮತ್ತು ಕೋಟಗಿರಿ ಬಳಿಯ 315 ಎಕರೆ ಆಸ್ತಿಯಲ್ಲಿ ತರಕಾರಿ ಮತ್ತು ಹೂವಿನ ತೋಟವನ್ನು ಹೊಂದಿದ್ದು, ಇವರ ಎಸ್ಟೇಟ್ ನಲ್ಲಿ ಕಳೆದ ಎರಡು ದಶಕಗಳಿಂದ ಒಟ್ಟು 627 ನೌಕರರು ಕೆಲಸ ಮಾಡುತ್ತಿದ್ದಾರೆ.
ಶಿವಕುಮಾರ್ ಅವರು ತಮ್ಮ ತಂದೆಯ ಉಡುಪು ತಯಾರಿಕಾ ಘಟಕಗಳನ್ನೂ ನಿರ್ವಹಿಸುತ್ತಿದ್ದಾರೆ. ಪತ್ನಿ ಧರಣ್ಯ, ಮಗ ಧನ್ವಂತ್ ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ.
60 ಎಕರೆ ಜಮೀನು ಹೊಂದಿರುವ ಶಿವಕುಮಾರ್ ತಮ್ಮ ಬೆಳವಣಿಗೆಗೆ ಕೆಲಸಗಾರರ ಕೊಡುಗೆಗೆ ಶ್ಲಾಘನೆಯ ಸಂಕೇತವಾಗಿ ಕಳೆದ ಐದು ವರ್ಷಗಳಿಂದ ಗೃಹೋಪಯೋಗಿ ಉಪಕರಣಗಳು ಮತ್ತು ನಗದು ಬೋನಸ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು.
ಈ ವರ್ಷ ಮ್ಯಾನೇಜರ್, ಸೂಪರ್ ವೈಸರ್, ಸ್ಟೋರ್ ಕೀಪರ್, ಕ್ಯಾಷಿಯರ್, ಫೀಲ್ಡ್ ಸ್ಟಾಫ್, ಡ್ರೈವರ್ ಗಳಂತಹ 15 ಉದ್ಯೋಗಿಗಳಿಗೆ ತಲಾ 2 ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಖರೀದಿಸಿದ್ದಾರೆ.
ಈ ಕುರಿತು ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, ಉದ್ಯೋಗಿಗಳು ನನ್ನ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಹಿಂದೆ ಅವರಿಗಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಿದ್ದೆ. ಈ ಬಾರಿ ಕೆಲವು ಕಾರ್ಮಿಕರಿಗೆ ಬೈಕುಗಳನ್ನು ಉಡುಗೊರೆಯಾಗಿ ನೀಡಲು ಬಯಸಿದ್ದು, ಕಳೆದ ಭಾನುವಾರ ಖರೀದಿ ಮಾಡಿದ್ದೆ. ಬೈಕ್ ಹೊರತುಪಡಿಸಿ ಇತರ ಕಾರ್ಮಿಕರಿಗೆ ಎಲ್‌ಸಿಡಿ ಟಿವಿ ಮತ್ತು ಶೇ. 18ರಷ್ಟು ಬೋನಸ್ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಮಿಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ಬಯಸಿದ್ದರಿಂದ ಎಸ್ಟೇಟ್ ಸಮೀಪದ ನೆಡುಗುಳ ಪಂಚಾಯತ್ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕರನ್ನು ನೇಮಿಸಿ ಕಳೆದ ಮೂರು ವರ್ಷಗಳಿಂದ ಅವರಿಗೆ ಶಿವಕುಮಾರ್ ಸಂಬಳವನ್ನೂ ನೀಡುತ್ತಿದ್ದಾರೆ. ಮುಚ್ಚುವ ಹಂತದಲ್ಲಿದ್ದ ಶಾಲೆಯಲ್ಲಿ ಪ್ರಸ್ತುತ 320 ವಿದ್ಯಾರ್ಥಿಗಳಿದ್ದು, 80 ಮಂದಿ ಎಸ್ಟೇಟ್‌ನಿಂದ ಬಂದ ಮಕ್ಕಳು. ಕಾರ್ಮಿಕರಿಗೆ ಉಚಿತ ಔಷಧ ನೀಡಲು ಔಷಧಾಲಯವನ್ನು ಶಿವಕುಮಾರ್ ನಡೆಸುತ್ತಿದ್ದಾರೆ.