Demand for 15 acres of land, BMW car, 150 character gold as dowry - student committed suicide

ವರದಕ್ಷಿಣೆಯಾಗಿ 15 ಎಕರೆ ಜಾಗ, BMW ಕಾರ್, 150 ಪವನ್ ಚಿನ್ನಕ್ಕೆ ಬೇಡಿಕೆ – ಮದುವೆ ನಿಗದಿಯಾಗಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ನ್ಯೂಸ್ ಆ್ಯರೋ : ಮದುವೆಗೂ ಮುನ್ನವೇ ನೀಡಿದ ವರದಕ್ಷಿಣೆ ಕಿರುಕುಳಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೈದು ಸಾವಿಗೆ ಶರಣಾದ ಘಟನೆ ತಿರುವನಂತಪುರಂ ನಲ್ಲಿ ನಡೆದಿದೆ.

ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ ಶಹಾನಾ ಮಂಗಳವಾರ ಬೆಳಗ್ಗೆ ಕಾಲೇಜು ಬಳಿಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಶಹಾನಾ ಪೋಷಕರು ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುವ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ‌ ನಡೆಸುತ್ತಿದ್ದಾರೆ.

ಶಹಾನಾ ಗೆ ಮದುವೆ ನಿಗದಿಯಾಗಿದ್ದು ಅದರಂತೆ ಯುವ ವೈದ್ಯ ರುವೈಸ್ ಎಂಬುವವರ ಜೊತೆ ಮದುವೆ ಮಾತುಕತೆ ನಡೆದಿತ್ತು, ಈ ನಡುವೆ ಹುಡುಗನ ಕಡೆಯವರು ವರದಕ್ಷಿಣೆ ರೂಪದಲ್ಲಿ 150 ಪವನ್ ಚಿನ್ನ, 15 ಎಕರೆ ಜಾಗ ಜೊತೆಗೆ ಬಿಎಂಡಬ್ಲ್ಯೂ ಕಾರು ನೀಡುವಂತೆ ಕೇಳಿಕೊಂಡಿದ್ದಾರೆ.

ಆದರೆ ಶಹಾನಾ ಮನೆಯವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ, ಆದರೂ ಐದು ಎಕರೆ ಜಾಗ ಜೊತೆಗೆ ಕಾರು ನೀಡಲು ಶಹಾನಾ ಕುಟುಂಬ ಮುಂದಾಗಿತ್ತು. ಆದರೆ ರುವೈಸ್ ಕುಟುಂಬದವರು ತಾವು ಹೇಳಿದ್ದಷ್ಟೇ ನೀಡಬೇಕೆಂದು ಹಠಹಿಡಿದಿದ್ದರು. ಆದರೆ ಅಷ್ಟೊಂದು ವರದಕ್ಷಿಣೆ ನೀಡಲು ಆಗುವುದಿಲ್ಲ ಎಂದಾಗ ರುವೈಸ್ ಕುಟುಂಬ ಶಹಾನಾ ಮದುವೆ ವಿಚಾರದಿಂದ ದೂರ ಉಳಿಯಲು ಪ್ರಾರಂಭಿಸಿದ್ದಾರೆ ಇದರಿಂದ ಮನನೊಂದ ಶಹಾನಾ ತಾನು ಇದ್ದ ರೂಮಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಇತ್ತ ಮಗಳು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ತಿಳಿಯುತ್ತಲೇ ಶಹಾನಾ ಪೋಷಕರು ಪೊಲೀಸ್ ಠಾಣೆಯಲ್ಲಿ ರುವೈಸ್ ಕುಟುಂಬದ ವಿರುದ್ಧ ವರದಕ್ಷಿಣೆ ದೂರು ದಾಖಲಿಸಿದ್ದು, ಶಹಾನಾ ಕುಟುಂಬದವರ ದೂರಿನ ಮೇರೆಗೆ ಪೊಲೀಸರು ರುವೈಸ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.