Cameras traps installed to prevent illegal mining at forests

ಇನ್ಮುಂದೆ ಅರಣ್ಯದಲ್ಲಿ ನಡೆಯೊಲ್ಲ ಅಕ್ರಮ ಕಳ್ಳಾಟ…! – ಬಂದಿದೆ ಕ್ಯಾಮೆರಾ ಟ್ರ್ಯಾಪಿಂಗ್ : ಏನಿದು ಹೊಸ ಸುದ್ದಿ…?

ನ್ಯೂಸ್ ಆ್ಯರೋ : ಸಾಮಾನ್ಯವಾಗಿ ವಂಚನೆ, ಭ್ರಷ್ಟಾಚಾರ ನಡೆಯದ ಕ್ಷೇತ್ರಗಳು ಯಾವುದಿದೆ ಹೇಳಿ. ಎಲ್ಲಾ ವಿಚಾರದಲ್ಲೂ ಅಕ್ರಮ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಅದರಲ್ಲಿ ಮರಗಳ್ಳತನವೂ ಒಂದು. ಕೆಲವು ಖದೀಮರು ಅರಣ್ಯದ ಬೆಲೆ ಬಾಳುವ ಮರಗಳಿಂದ ಹಿಡಿದು ವನ್ಯಜೀವಿಗಳ ಚರ್ಮ, ಉಗುರು, ಆನೆಗಳ ದಂತದಿಂದಲೂ ಹಣ ಮಾಡುತ್ತಾರೆ‌. ಆದರೆ ಇನ್ನು ಮುಂದೆ ಅವೆಲ್ಲವುದಕ್ಕೂ ಫುಲ್ ಸ್ಟಾಪ್ ಬೀಳಲಿದೆ.

ಇನ್ಮುಂದೆ ಅರಣ್ಯದಲ್ಲಿ ಮರಗಳ್ಳರ ಆಟ ನಡೆಯೋದಿಲ್ಲ. ಅರಣ್ಯದ ಅಂತರಾಳದ ರಹಸ್ಯ, ಪ್ರಾಣಿಗಳ ಲೆಕ್ಕದ ಜೊತೆಗೆ ಹೆಜ್ಜೆ ಗುರುತನ್ನು ಕ್ಷಣಮಾತ್ರದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಮಾಡಲಾಗುತ್ತದೆ.

ಏನಿದು ಕ್ಯಾಮೆರಾ ಟ್ರ್ಯಾಪಿಂಗ್…?

ಬನ್ನೇರುಘಟ್ಟ ಅರಣ್ಯ ಪ್ರದೇಶ ಕ್ಯಾಮೆರಾ ಟ್ರ್ಯಾಪಿಂಗ್​ಗೆ ಒಳಪಡಲಿದೆ. ವಿದ್ಯಾರ್ಥಿಗಳಿಗೆ ಕುತೂಹಲ ಮೂಡಿಸುವ ಇದರ ಬಗ್ಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಕೇಳಿ ಅಚ್ಚರಿ ಚಕಿತರಾಗಿದ್ದಾರೆ.

ಇತ್ತೀಚೆಗಂತೂ ನಗರದಲ್ಲಿ ಪದೇ ಪದೇ ಚಿರತೆ ಪ್ರತ್ಯಕ್ಷವಾಗ್ತಿದೆ. ಇದು ನಗರದ ಜನರಲ್ಲಿ ಆತಂಕ ಮೂಡಿಸ್ತಿದೆ. ಈ ನಡುವೆ ಕಾಡಿನಲ್ಲಿ ಮರಗಳ್ಳರ ಹಾವಳಿಯು ಹೆಚ್ಚಾಗ್ತಿದೆ. ಅಲ್ಲದೇ ಅರಣ್ಯದಲ್ಲಿ ಪ್ರಾಣಿಗಳು ಎಷ್ಟಿದೆ ಅನ್ನೋದರ ಲೆಕ್ಕವೇ ಇಲ್ಲದಂತಾಗಿದೆ. ಹೀಗೆ ಕಾನನದಲ್ಲಿ ಅಡಗಿರೋ ಸಾಕಷ್ಟು ಸಾಲು ಸಾಲು ಸಮಸ್ಯೆಗೆ ಇನ್ಮುಂದೆ ಕ್ಯಾಮೆರಾ ಟ್ರ್ಯಾಪಿಂಗ್​ ಫುಲ್ ಸ್ಟಾಪ್​ ಇಡಲಿದೆ.

ವನ್ಯ ಜೀವಿ ವಿಜ್ಞಾನಿ ಡಾ. ಸಂಜಯ್ ಗುಬ್ಬಿ ಹೇಳುವಂತೆ ‘ಕ್ಯಾಮೆರಾ ಟ್ರ್ಯಾಪಿಂಗ್ ಹುಲಿ, ಚಿರತೆಗಳ ಗುರುತನ್ನು ಪತ್ತೆ ಮಾಡಲು ಇದನ್ನು ಬಳಸುತ್ತಿದ್ದೆವು. ಇದೇ ತಂತ್ರಜ್ಞಾನವನ್ನು ಕಾಡಿನಲ್ಲಿ ನಡೆಯುವ ಕಳ್ಳಬೇಟೆ, ಕಳ್ಳಸಾಗಣೆ ​ಸೇರಿದಂತೆ ಅರಣ್ಯದ ನೈಸರ್ಗಿಕತೆ ಕದಿಯುವವರನ್ನು ಇದರ ಮೂಲಕ ಪತ್ತೆ ಮಾಡಬಹುದಾಗಿದೆ’.

ಕ್ಯಾಮೆರಾ ಟ್ರ್ಯಾಪಿಂಗ್ ಪ್ರಯೋಜನವೇನು..?

ಇವು ಕಾಡು ಪ್ರಾಣಿಗಳ ಚಲನವಲನ ಗುರುತಿಸಿ ಅವುಗಳ ಚಿತ್ರ ಸೆರೆ ಹಿಡಿಯಲು ಅನುಕೂಲವಾಗಲಿದೆ. ಅಲ್ಲದೇ ಚಿರತೆ ಪತ್ತೆ ಹಚ್ಚುವಿಕೆ, ಮರಗಳ್ಳರ ಎಂಟ್ರಿ ಸೇರಿದಂತೆ ಕಾನನದಲ್ಲಿ ನಡೆಯೋ ಅನೇಕ ಚಲನವಲನಗಳನ್ನ ಸೆರೆ ಹಿಡಿಯೋದರ ಜೊತೆಗೆ ಕೂಡಲೇ ಸಿಗ್ನಲ್ ಕೂಡ ನೀಡುತ್ತದೆ.

ಒಟ್ಟಾರೆಯಾಗಿ ಈ ನೂತನ ಆವಿಷ್ಕಾರ ಅರಣ್ಯ ಸಂರಕ್ಷಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುವುದರಲ್ಲಿ ಎರಡು ಮಾತಿಲ್ಲ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಅನಿವಾರ್ಯತೆಯೂ ಇದೆ.