
ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ – ಅಕ್ರಮ ಕಾಮಗಾರಿ, ಭ್ರಷ್ಟಾಚಾರ ಪ್ರಕರಣದಲ್ಲಿ ರೋಹಿಣಿ ತಲೆದಂಡ ಸಾಧ್ಯತೆ
- ಕರ್ನಾಟಕ
- September 8, 2023
- No Comment
- 43
ನ್ಯೂಸ್ ಆ್ಯರೋ : ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ವೇಳೆ ಜಿಲ್ಲಾಧಿಕಾರಿ ನಿವಾಸದ ನವೀಕರಣ ಹಾಗೂ ಬಟ್ಟೆಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪ ಹೊತ್ತಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ವೇಳೆ ಮಾಡಿದ್ದ ಜಿಲ್ಲಾಧಿಕಾರಿ ನಿವಾಸದ ನವೀಕರಣ ಹಾಗೂ ಬಟ್ಟೆಬ್ಯಾಗ್ ಖರೀದಿಯಲ್ಲಿ ನಿಯಮ ಉಲ್ಲಂಘನೆ ಆರೋಪ ಈಗ ಸಾಬೀತಾಗಿದ್ದು, ಸರ್ಕಾರದ ಪ್ರಾಥಮಿಕ ತನಿಖಾ ವರದಿ ಪ್ರಕಾರ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಡಿಪಿಎಆರ್ ಅಧೀನ ಕಾರ್ಯದರ್ಶಿ ಜೇಮ್ಸ್ ಥಾರಖನ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಪತ್ರದ ಆಧಾರದ ಹಿನ್ನೆಲೆಯಲ್ಲಿ ಸಮಗ್ರ ವಿಚಾರಣೆಗೆ ನಿವೃತ್ತ ಐಎಎಸ್ ಅಧಿಕಾರಿ ಯೋಗೇಂದ್ರ ತ್ರಿಪಾಠಿ ಅವರನ್ನು ನೇಮಿಸಲಾಗಿದ್ದು, ಬಿಬಿಎಂಪಿ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಅವರನ್ನು ಸರ್ಕಾರದ ಪರವಾಗಿ ಪ್ರಕರಣದ ವಿವರ ಒದಗಿಸಲು ನೇಮಿಸಲಾಗಿದೆ.
ಜಿಲ್ಲಾಧಿಕಾರಿ ನಿವಾಸ ನವೀಕರಣಕ್ಕೆ ಯಾವ ಅನುಮತಿಯನ್ನೂ ಪಡೆದಿಲ್ಲ. ನವೀಕರಣಕ್ಕೆ ಬಳಿಸಿದ ಹಣಕ್ಕೂ ಆರ್ಥಿಕ ಇಲಾಖೆ ಅನುಮತಿ ಪಡೆದಿಲ್ಲ. ಇದು ನಿಯಮ ಉಲ್ಲಂಘನೆಯಾಗಿದ್ದು, ಇನ್ನು ಬಟ್ಟೆಬ್ಯಾಗ್ ಖರೀದಿಯಲ್ಲೂ ಯಾವ ನಿಯಮಾವಳಿ ಪಾಲನೆ ಆಗಿಲ್ಲ. ಆದ್ದರಿಂದ ಶಿಸ್ತುಕ್ರಮ ಜರುಗಿಸಿ ಎಂದು ಶಿಫಾರಸು ಮಾಡಲಾಗಿದೆ. ಆಗಿನ ಕೆ.ಆರ್.ನಗರ ಶಾಸಕರಾಗಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ರೋಹಿಣಿ ಸಿಂಧೂರಿ ಅವರ ವಿರುದ್ಧ ಈ ಸಂಬಂಧ ಆರೋಪ ಮಾಡಿದ್ದರು. ಅಲ್ಲದೇ ವಿಧಾನಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿತ್ತು. ಇದಾದ ಬಳಿಕ ಐಪಿಎಸ್ ಅಧಿಕಾರಿ ರೂಪಾ ಡಿ. ಮೌದ್ಗಿಲ್ ಹಾಗೂ ರೋಹಿಣಿ ಸಿಂಧೂರಿ ನಡುವೆ ಕಚ್ಚಾಟವಾಗಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು.