No Electricity At Stadium Hosting India Vs Australia T20 Today. Bill Not Paid

ಕೋಟಿ ಕೋಟಿ ಕರೆಂಟ್‌ ಬಿಲ್‌ ಕಟ್ಟದ ಸ್ಟೇಡಿಯಂ – ಕತ್ತಲಲ್ಲೇ ನಡೆಯುತ್ತಾ ಇಂದಿನ Ind vs Aus ಟಿ20 ಪಂದ್ಯ?

ನ್ಯೂಸ್ ಆ್ಯರೋ : ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಶುಕ್ರವಾರ (ಇವತ್ತು ) ಭಾರತ ಮತ್ತು ಆಸ್ಟ್ರೇಲಿಯಾ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಯಾವುದೇ ಬೆಳಕಿಲ್ಲದೆ ಕತ್ತಲಲ್ಲಿ ನಡೆಯುವುದೇ ಎನ್ನುವ ಆತಂಕ ಕಾಡುತ್ತಿದೆ.

ಯಾಕೆಂದರೆ ಇನ್ನು ಪಂದ್ಯ ಶುರುವಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಕ್ರೀಡಾಂಗಣ ಸೇರಿದಂತೆ ಸುತ್ತಮುತ್ತ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಿದೆ. ಇದಕ್ಕೆ ಕಾರಣವೂ ಇದೆ. ಯಾಕೆಂದರೆ 2009 ರಿಂದ ಕ್ರೀಡಾಂಗಣದ ವಿದ್ಯುತ್ ಬಿಲ್ ಅನ್ನೇ ಪಾವತಿಸಿಲ್ಲ ಎನ್ನಲಾಗಿದೆ.

ಸುಮಾರು 3.16 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಇರಿಸಿರುವ ಈ ಕ್ರೀಡಾಂಗಣದಲ್ಲಿ ಐದು 5 ವರ್ಷಗಳ ಹಿಂದೆಯೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

ಸದ್ಯ ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಮನವಿ ಮೇರೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗಳನ್ನು ಮಾತ್ರ ಒಳಗೊಂಡಿದೆ. ಹೀಗಾಗಿ ಶುಕ್ರವಾರ ನಡೆಯುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20 ಪಂದ್ಯಕ್ಕೆ ಫ್ಲಡ್‌ಲೈಟ್‌ಗಳನ್ನು ಜನರೇಟರ್ ಬಳಸಿ ಉರಿಸಬೇಕಾಗಬಹುದು.

ಕ್ರೀಡಾಂಗಣದಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ 2018ರಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ಬೇಸರ ವ್ಯಕ್ತಪಡಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಬಳಿಕ 2009 ರಿಂದ ವಿದ್ಯುತ್ ಬಿಲ್ ಪಾವತಿಯಾಗಿಲ್ಲ. ಬಾಕಿ ಬಿಲ್‌ 3.16 ಕೋಟಿ ರೂ. ಇದೆ ಎಂದು ಘೋಷಿಸಲಾಗಿತ್ತು.

ಕ್ರೀಡಾಂಗಣದ ನಿರ್ಮಾಣ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯೂಡಿ) ಗೆ ನೀಡಲಾಗಿದ್ದು, ಬಾಕಿ ಇರುವ ವಿದ್ಯುತ್ ವೆಚ್ಚವನ್ನು ಕ್ರೀಡಾ ಇಲಾಖೆ ಭರಿಸಬೇಕಿತ್ತು. ಆದರೆ ಎರಡು ಇಲಾಖೆಗಳ ಆರೋಪ ಪ್ರತ್ಯಾರೋಪದಿಂದಾಗಿ ವಿದ್ಯುತ್ ಬಿಲ್ ಬಾಕಿ ಹಾಗೇ ಉಳಿದಿದೆ.

ಕ್ರೀಡಾಂಗಣಕ್ಕೆ ತಾತ್ಕಾಲಿಕವಾಗಿರುವ ವಿದ್ಯುತ್ ಸಂಪರ್ಕದ ಸಾಮರ್ಥ್ಯ ಹೆಚ್ಚಿಸಲು ಕ್ರಿಕೆಟ್ ಸಂಸ್ಥೆಯು ಅರ್ಜಿ ಸಲ್ಲಿಸಿದ್ದರೂ ಈ ಸಂಬಂಧ ಯಾವುದೇ ಕಾರ್ಯ ಆರಂಭವಾಗಿಲ್ಲ ಎಂದು ರಾಯ್‌ಪುರ ಗ್ರಾಮಾಂತರ ವೃತ್ತದ ಉಸ್ತುವಾರಿ ಅಶೋಕ್ ಖಂಡೇಲ್‌ವಾಲ್ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.