
ಪ್ರಜ್ವಲ್ ರೇವಣ್ಣ ಅರ್ಜಿ ವಜಾಗೊಳಿಸಿದ ಹೈಕೋರ್ಟ್ – ಅಸಿಂಧು ಆದೇಶಕ್ಕೆ ತಡೆ ನೀಡಲು ನಿರಾಕರಣೆ
- ರಾಜಕೀಯ
- September 11, 2023
- No Comment
- 46
ನ್ಯೂಸ್ ಆ್ಯರೋ : ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಸಂಸದ ಸ್ಥಾನ ಅಸಿಂಧುಗೊಳಿಸಿದ ಆದೇಶವನ್ನು ಅಮಾನತು ಮಾಡಲು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ತಡೆ ನೀಡಲು ನಿರಾಕರಣೆ
ಸುಳ್ಳು ದಾಖಲೆಗಳನ್ನು ನೀಡಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ ಎನ್ನುವ ದೂರಿನ ಆಧಾರದಲ್ಲಿ ಪ್ರಜ್ವಲ್ ಅವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಈ ಆದೇಶವನ್ನು ಸುಪ್ರಿಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ತನಕ ತಡೆಯಬೇಕೆಂಬ ಪ್ರಜ್ವಲ್ ಮನವಿಯನ್ನು ನ್ಯಾ.ಕೆ.ನಟರಾಜನ್ ಪುರಸ್ಕರಿಸಲಿಲ್ಲ. ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದರು.
ಶಾಸಕ ಎ.ಮಂಜು ಮತ್ತು ವಕೀಲ ದೇವರಾಜೇಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ್ದ ಕೋರ್ಟ್ ಪ್ರಜ್ವಲ್ ಗೆ ಶಾಕ್ ನೀಡಿತ್ತು. ಚುನಾವಣೆ ವೇಳೆ ಪ್ರಮಾಣ ಪತ್ರ ಸಲ್ಲಿಸುವಾಗ ಹಲವು ಆಸ್ತಿಗಳನ್ನು ಮುಚ್ಚಿಟ್ಟಿದ್ದಾರೆಂಬ ಆರೋಪದ ಹಿನ್ನಲೆಯಲ್ಲಿ ಸಂಸದ ಸ್ಥಾನವನ್ನು ಅನರ್ಹಗೊಳಿಸಲಾಗಿತ್ತು.
ಪ್ರಜ್ವಲ್ ವಿರುದ್ಧದ ಆರೋಪಗಳೇನು?
ಪ್ರಜ್ವಲ್ ಅಕ್ರಮವಾಗಿ ಸರಕಾರಿ ಜಮೀನು ಖರೀದಿಸಿದ್ದಾರೆ. ಸುಮಾರು 5 ಕೋಟಿ ರೂ. ಬೆಲೆ ಬಾಳುವ ಹೊಳೆನರಸೀಪುರದ ಚೆನ್ನಾಂಬಿಕಾ ಕನ್ವೆನ್ ಷನ್ ಸೆಂಟರ್ ಕಟ್ಟಡದ ಮೌಲ್ಯವನ್ನು 14 ಲಕ್ಷ ರೂ. ಎಂದು ತೋರಿಸಿದ್ದಾರೆ. ಬೆಂಗಳೂರಿನ ಕರ್ಣಾಟಕ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ರೂ. ಇದೆ ಎಂದು ಘೋಷಿಸಿದ್ದರು. ಆದರೆ ಅಲ್ಲಿ 48 ಲಕ್ಷ ರೂ. ಇದೆ. ಅಲ್ಲದೆ ಆದಾಯ ತೆರಿಗೆ ವಿವರಗಳನ್ನೂ ತಪ್ಪಾಗಿ ನಮೂದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಹೀಗಾಗಿ ಪ್ರಜ್ವಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಸೆಪ್ಟಂಬರ್ 1ರಂದು ಆದೇಶ ಹೊರಡಿಸಿತ್ತು. ಚುನಾವಣಾ ಅಕ್ರಮದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ಸಹೋದರೆ ಸೂರಜ್ ರೇವಣ್ಣ ಅವರಿಗೂ ನೋಟಿಸ್ ಜಾರಿ ಮಾಡಲಾಗಿತ್ತು.
ಪ್ರಜ್ವಲ್ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜಯಿ ಎಂದು ಘೋಷಿಸಬೇಕು ಎನ್ನುವ ಎ.ಮಂಜು ಅವರ ಮನವಿಯನ್ನೂ ಹೈಕೋರ್ಟ್ ತಿರಸ್ಕರಿಸಿದೆ.