ಲೋಕಸಭಾ ಕಲಾಪದ ವೇಳೆ ಒಳನುಗ್ಗಿದ ಇಬ್ಬರು ಅಪರಿಚಿತರು – ಕಲರ್ ಬಾಂಬ್ ಸಿಡಿಸಿ ತಪ್ಪಿಸಿಕೊಳ್ಳಲು ಯತ್ನ, ಇಬ್ಬರೂ ಅರೆಸ್ಟ್

ನ್ಯೂಸ್ ಆ್ಯರೋ : ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಅಪರಿಚಿತರು ಸದನಕ್ಕೆ ನುಗ್ಗಿರುವ ಘಟನೆ ಇಂದು ವರದಿಯಾಗಿದೆ.

ಲೋಕಸಭೆ ಕಲಾಪ ನಡೆಯುತ್ತಿದ್ದಾಗ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಕೆಳಗೆ ಜಿಗಿದು ಸದನದಲ್ಲಿ ಸುತ್ತಲೂ ಓಡಾಡಲಾರಂಭಿಸಿದರು. ಅವರು ತಮ್ಮ ಕೈಯಲ್ಲಿದ್ದ ಸಾಧನಗಳಿಂದ ಫ್ಲೋರೊಸೆಂಟ್ ಬಣ್ಣದ ಅನಿಲವನ್ನು ಸಿಂಪಡಿಸುತ್ತಾ ಸೆರೆಹಿಡಿಯುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದರು ಎಂದು ಕೆಲವು ಮೂಲಗಳು ತಿಳಿಸಿವೆ.

ಕೂಡಲೇ ಲೋಕಸಭೆಯ ಕಲಾಪವನ್ನು ಸ್ಥಗಿತಗೊಳಿಸಲಾಯಿತು ಮತ್ತು ಸಂಸದರು ಲೋಕಸಭೆಯಿಂದ ಹೊರಬರಲು ಪ್ರಾರಂಭಿಸಿದರು. ಒಳನುಗ್ಗಿದ ವ್ಯಕ್ತಿಗಳು ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಸಂಸದರು ಮತ್ತು ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಡಿದು ವಿಚಾರಣೆ ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಉಂಟಾದ ಗೊಂದಲದಲ್ಲಿ ಭದ್ರತೆ ಮುರಿದು ಒಳನುಗ್ಗಿದವರು ಇಬ್ಬರೋ ಅಥವಾ ಹಲವು ಮಂದಿ ಇದ್ದಾರೋ ಎಂಬುದು ಇನ್ನೂ ತಿಳಿದಿಲ್ಲ. ಗೊಂದಲದಲ್ಲಿ ಸಂಸದರು ಲೋಕಸಭೆಯಿಂದ ಹೊರಬಂದರು. ಗ್ಯಾಲರಿಯಿಂದ ಜಿಗಿದವರು ಯಾವುದೋ ಬಗೆಯ ರೀತಿಯ ಅನಿಲವನ್ನು ಸಿಂಪಡಿಸುತ್ತಿದ್ದಾರೆ ಎಂದು ಹೇಳಿದರು.