ಜೆಎಸ್ ಡಬ್ಲ್ಯೂ ಮುಖ್ಯಸ್ಥ ಸಜ್ಜನ್ ಜಿಂದಾಲ್ ವಿರುದ್ಧ ಬಿತ್ತು FIR – ಅತ್ಯಾಚಾರ ಆರೋಪದಲ್ಲಿ ಪ್ರಕರಣ ದಾಖಲು…!!

ನ್ಯೂಸ್ ಆ್ಯರೋ : ಅತ್ಯಾಚಾರ ಅನ್ನುವಂತದ್ದು ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಕಾಮರೋಗ.‌ ಅದೆಷ್ಟೋ ಪ್ರಕರಣಗಳು ಇನ್ನೂ ನ್ಯಾಯ ಸಿಗದೆ ಕೊಳೆತು ಹೋಗುತ್ತಿದೆ. ಈ ಸಂದರ್ಭದಲ್ಲೇ ಇದೀಗ ಮುಂಬೈ ಪೋಲಿಸರು ಜೆಎಸ್ಡಬ್ಲ್ಯು ಗ್ರೂಪ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಜ್ಜನ್ ಜಿಂದಾಲ್ ವಿರುದ್ಧ ಅತ್ಯಾಚಾರದ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ ಏನು..?

2022, ಜ.24ರಂದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಂದಾಲ್ ಕಚೇರಿಯ ಪೆಂಟ್ಹೌಸ್ ನಲ್ಲಿ ಜಿಂದಾಲ್ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಮುಂಬೈ ಮೂಲದ ಮಹಿಳೆ ತನ್ನ ದೂರಿದ್ದಾರೆ.

2021ರ ಅ.8ರಂದು ದುಬೈನಲ್ಲಿ ತಾನು ಮೊದಲ ಬಾರಿ ಜಿಂದಾಲ್ ರನ್ನು ಭೇಟಿಯಾಗಿದ್ದೆ ಮತ್ತು ತಾವು ದೂರವಾಣಿ ಸಂಖ್ಯೆಗಳನ್ನು ವಿನಿಮಯಿಸಿಕೊಂಡಿದ್ದೆವು. ಇನ್ನೂ ಕೆಲವು ಸಲ ತಾವು ಭೇಟಿಯಾಗಿದ್ದೆವು. ನಂತರ ತಾನು ಹಲವು ಬಾರಿ ಆಕ್ಷೇಪಿಸಿದ್ದರೂ ಅವರು ತನಗೆ ಲೈಂಗಿಕ ಕಿರುಕುಳಗಳನ್ನು ನೀಡತೊಡಗಿದ್ದರು. 2022.ಜ.24ರಂದು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿಯ ಕಟ್ಟಡದ ಪೆಂಟ್ಹೌಸ್‌ ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಫೆ.16ರಂದು ತಾನು ದೂರು ಸಲ್ಲಿಸಲು ಪೋಲಿಸರ ಬಳಿ ತೆರಳಿದ್ದೆ. ಅವರು ತನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರಾದರೂ ಅದರ ಪ್ರತಿಯನ್ನು ತನಗೆ ನೀಡಿರಲಿಲ್ಲ ಮತ್ತು ಎಫ್ಐಆರ್ ದಾಖಲಿಸಿಕೊಂಡಿರಲಿಲ್ಲ ಎಂದು ಡಿ.13ರಂದು ದಾಖಲಾಗಿರುವ ದೂರಿನಲ್ಲಿ ಮಹಿಳೆ ತಿಳಿಸಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ.

ತಿಂಗಳುಗಳ ಬಳಿಕ ಡಿ.5ರಂದು ಮಹಿಳೆ ಬಾಂಬೆ ಹೈಕೋರ್ಟ್ ನಲ್ಲಿ ಪೋಲಿಸರ ವಿರುದ್ಧ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇದಾದ ಬಳಿಕ ನ್ಯಾಯಾಲಯದ ಆದೇಶದಂತೆ ಪೋಲಿಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಈ ಮಹಿಳೆಯ ಆರೋಪಗಳ ವಿರುದ್ಧ ಜಿಂದಾಲ್ ಈವರೆಗೆ ಏನೂ ಪ್ರತಿಕ್ರಿಯಿಸಿಲ್ಲ. ಈ ಪ್ರಕರಣ ಮುಂದೆ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ನೋಡಬೇಕಷ್ಟೆ.