ಕೇಂದ್ರ ಸರ್ಕಾರದ 370ನೇ ವಿಧಿ ರದ್ದು ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ – ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದ ಸುಪ್ರೀಂ ಪಂಚಪೀಠ

ನ್ಯೂಸ್ ಆ್ಯರೋ : ಸಂವಿಧಾನದಲ್ಲಿ ಪ್ರತಿಯೊಂದು ವಿಚಾರಕ್ಕೂ ಕೂಡಾ ವಿಶೇಷವಾದ ಮಾನ್ಯತೆ ಇದೆ, ಗೌರವ ಇದೆ. ಅದಕ್ಕೆ ಧಕ್ಕೆ ತಾರದೆ ಸಂವಿಧಾನದ ನಿಯಮಗಳನ್ನು ಅನುಸರಿಸಿಕೊಳ್ಳುವುದೇ ಭಾರತೀಯ ಪ್ರಜೆಗಳ ಮೂಲ ಕರ್ತವ್ಯ. 2019ರಲ್ಲಿ ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿರುವುದನ್ನು ಮೋದಿ ಸರ್ಕಾರ ರದ್ದುಪಡಿಸಿದ್ದು, ಭಾರತ ಸರ್ಕಾರದ ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿದ್ದವು.

ಸುದೀರ್ಘ ವಿಚಾರಣೆ ನಡೆಸಿರುವ ಕೋರ್ಟ್ “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಸಂಸತ್ ಮತ್ತು ರಾಷ್ಟ್ರಪತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ನ ವಿಶೇಷ ಪಂಚಪೀಠ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಸುಪ್ರೀಂಕೋರ್ಟ್‌ ಇಂದು ಆರ್ಟಿಕಲ್ 370 ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಅಂತಿಮ ತೀರ್ಪು ಪ್ರಕಟಿಸುತ್ತಿದ್ದು, ಈ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಕಣಿವೆ ರಾಜ್ಯದಲ್ಲಿ ಹೆಜ್ಜೆ, ಹೆಜ್ಜೆಗೂ ಭದ್ರತಾ ಸರ್ಪಗಾವಲು ಹಾಕಲಾಗಿದೆ.

5 ನ್ಯಾಯಧೀಶರ ಸಂವಿಧಾನ ಪೀಠದಿಂದ ಮಹತ್ವದ ತೀರ್ಪು..!

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕಳೆದ ಆಗಸ್ಟ್‌ನಲ್ಲಿ 16 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿತ್ತು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಸಂವಿಧಾನದ 370 ನೇ ವಿಧಿ ತಾತ್ಕಾಲಿಕ ನಿಬಂಧನೆಯಾಗಿದೆ. ಅದನ್ನು ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಪತಿಗೆ ಇದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಗವಾಯಿ, ಸೂರ್ಯಕಾಂತ್ ಅವರನ್ನೊಳಗೊಂಡ ಪಂಚ ಪೀಠವು ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಹೇಳಿದ್ದೇನು?

ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಸಂಸತ್ ಮತ್ತು ರಾಷ್ಟ್ರಪತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.
ಕೇಂದ್ರ ಸರ್ಕಾರ ಕೆಲ ಸಮಯಗಳಲ್ಲಿ ತನ್ನ ಅಧಿಕಾರ ಚಲಾಯಿಸಬಹುದು.

ಜಮ್ಮು ಕಾಶ್ಮೀರ ಭಾರತದ ಭಾಗವಾದಾಗ ಸಾರ್ವಭೌಮತ್ವ ಇರಲಿಲ್ಲ, ಭಾರತಕ್ಕೆ ಸೇರಿದ ಮೇಲೆ ಸಾರ್ವಭೌಮತ್ವ ಸಿಕ್ಕಿತು. ಭಾರತದ ಸಾರ್ವಭೌಮತ್ವವನ್ನು ಕಾಶ್ಮೀರದ ರಾಜ ರಾಜಹರಿಸಿಂಗ್ ಒಪ್ಪಿಕೊಂಡಿದ್ದ ಅಲ್ಲದೇ ಸಂವಿಧಾನವೇ ಅಂತಿಮ ಎಂದಿದ್ದ‌.

ಬೊಮ್ಮಾಯಿ ಪ್ರಕರಣ ಉಲ್ಲೇಖ ಮಾಡಿದ ನ್ಯಾಯಮೂರ್ತಿ ಚಂದ್ರಚೂಡ್, ಕಲಂ 356ರ ಅಡಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಪ್ರಶ್ನಿಸಲಾಗದು. ಸಂವಿಧಾನದ 370 ಆರ್ಟಿಕಲ್ ತಾತ್ಕಾಲಿಕ ಸ್ಥಾನಮಾನ ಅಷ್ಟೇ ಎಂದಿದೆ.

370 ಆರ್ಟಿಕಲ್ ರದ್ದಿಗೆ ಜಮ್ಮು ಕಾಶ್ಮೀರದ ವಿಧಾನಸಭೆಯ ಅನುಮತಿ ಬೇಕಿಲ್ಲ. ಜಮ್ಮು ಕಾಶ್ಮೀರದ ಏಕೀಕರಣವನ್ನು 370 ಆರ್ಟಿಕಲ್ ತಡೆಹಿಡಿಯಲು ಸಾಧ್ಯವಿಲ್ಲ.

ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಸಾಂವಿಧಾನಿಕ ಆದೇಶವನ್ನು ಹೊರಡಿಸುವ ರಾಷ್ಟ್ರಪತಿ ಅಧಿಕಾರವನ್ನು ನಾವು ಮಾನ್ಯವೆಂದು ಪರಿಗಣಿಸುತ್ತೇವೆ” ಎಂದು ಸಿಜೆಐ ಹೇಳಿದರು.

ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಯಿತು. ಇದು 1 ಮತ್ತು 370 ನೇ ವಿಧಿಗಳಿಂದ ಸ್ಪಷ್ಟವಾಗಿದೆ ಎಂದು ಅವರು ತೀರ್ಪು ಪ್ರಕಟಿಸುವಾಗ ಹೇಳಿದರು.

“ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು ಎಂದಿಗೂ ಶಾಶ್ವತ ಸಂಸ್ಥೆಯಾಗುವ ಉದ್ದೇಶವನ್ನು ಹೊಂದಿರಲಿಲ್ಲ” ಎಂದು ಸಿಜೆಐ ಹೇಳಿದರು.

“370 (3) ನೇ ವಿಧಿಯ ಅಡಿಯಲ್ಲಿ 370 ನೇ ವಿಧಿ ಅಸ್ತಿತ್ವದಲ್ಲಿಲ್ಲ ಎಂದು ಅಧಿಸೂಚನೆ ಹೊರಡಿಸುವ ರಾಷ್ಟ್ರಪತಿಗಳ ಅಧಿಕಾರವು ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯ ವಿಸರ್ಜನೆಯ ನಂತರವೂ ಅಸ್ತಿತ್ವದಲ್ಲಿದೆ. ಸಂವಿಧಾನ ರಚನಾ ಸಭೆಯ ಶಿಫಾರಸಿಗೆ ರಾಷ್ಟ್ರಪತಿಗಳು ಬದ್ಧರಾಗಿರಲಿಲ್ಲ. ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯನ್ನು ತಾತ್ಕಾಲಿಕ ಸಂಸ್ಥೆಯಾಗಿ ಮಾಡಲು ಉದ್ದೇಶಿಸಲಾಗಿತ್ತು” ಎಂದು ಸಿಜೆಐ ಹೇಳಿದರು.

ಆಗಸ್ಟ್ 5, 2019 ರಂದು, ಕೇಂದ್ರ ಸರ್ಕಾರವು 370 ನೇ ವಿಧಿಯ ಅಡಿಯಲ್ಲಿ ನೀಡಲಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು ಮತ್ತು ಈ ಪ್ರದೇಶವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಸೆಪ್ಟೆಂಬರ್ 5 ರಂದು ಸುಪ್ರೀಂ ಕೋರ್ಟ್ 16 ದಿನಗಳ ಕಾಲ ವಾದಗಳನ್ನು ಆಲಿಸಿದ ನಂತರ ತೀರ್ಪನ್ನು ಕಾಯ್ದಿರಿಸಿತು.