ಮಂಗಳೂರು : ಮದುವೆ ಹಾಲ್ ಗೆ ಮದುಮಗನ ಮಾಜಿ ಗರ್ಲ್ ಫ್ರೆಂಡ್ ಎಂಟ್ರಿ – ಕಲ್ಯಾಣ ಮಂಟಪದಲ್ಲಿ ರಂಪಾಟ, ಮದುವೆ ಏನಾಯ್ತು?

ನ್ಯೂಸ್ ಆ್ಯರೋ : ಮಂಗಳೂರಿನ ಕೋಟೆಕಾರಿನ ಬೀರಿ ಬಳಿ ಇರುವ ಸಭಾಂಗಣದಲ್ಲಿ ಮದುವೆ ನಡೆಯುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಮೈಸೂರಿನ ಯುವತಿಯೊಬ್ಬಳು ವರ ತನಗೆ ಮದುವೆಯಾಗುವುದಾಗಿ ಮೋಸ ಮಾಡಿದ್ದಾನೆ. ತನ್ನಿಂದ ಲಕ್ಷಗಟ್ಟಲೆ ಹಣ, ಚಿನ್ನ ಪಡೆದು ವಂಚಿಸಿದ್ದಾನೆ ಎಂದು ಪೊಲೀಸರ ಸಹಿತ ಬಂದು ಜಗಳವಾಡಿದ ಘಟನೆ ನಡೆದಿದೆ.

ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ ಯುವತಿಯನ್ನು ಇಂದು ಮದುವೆಯಾಗುತ್ತಿರುವ ವರನ ಮಾಜಿ ಪ್ರೇಯಸಿ ಎಂದು ಹೇಳಲಾಗುತ್ತಿದ್ದು, ತನ್ನನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗುತ್ತಿರುವುದನ್ನು ಪ್ರಶ್ನಿಸಿ ಆಕೆ ಗಲಾಟೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ತನಗೆ ಅನ್ಯಾಯವಾಗಿದೆ, ನ್ಯಾಯ ಬೇಕು ಎಂದು ಆಗ್ರಹ ಮಾಡಿದ್ದಾಳೆ.

ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ವಿವಾಹವಾಗುವುದಾಗಿ ನಂಬಿಸಿ ಆಕೆಯನ್ನು ಅಲ್ಲಿಲ್ಲಿ ಸುತ್ತಾಡಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ನಂತರ ಆತ ವರಸೆ ಬದಲಾಯಿಸಿದ್ದು, ಆಕೆಯನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದಾನೆ.

ಅಂದಹಾಗೆ ಸಂತ್ರಸ್ತ ಯುವತಿ ಕಳೆದ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಅರೋಪಿ ಅಕ್ಷಯ್​ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ನಡುವೆ ಮಂಗಳೂರಿನ ಯುವತಿ ಜೊತೆ ಅಕ್ಷಯ್​ಗೆ ವಿವಾಹ ನಿಶ್ಚಯವಾಗಿದೆ.

ಅಕ್ಷಯ್‌ಗೆ ಕರ್ನಾಟಕ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್​ನಲ್ಲಿ ಮದುವೆ ನಡೆಯುತ್ತಿರುವ ವಿಚಾರ ತಿಳಿದ ಬೆನ್ನಲ್ಲೇ ಉಳ್ಳಾಲ ಪೊಲೀಸರೊಂದಿಗೆ ಹಾಲ್‌ಗೆ ಆಗಮಿಸಿದ ಯುವತಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ್ದಾಳೆ. ನಂತರ ಪೊಲೀಸರೇ ಆಕೆಯನ್ನು ಹಾಲ್ ಬಳಿಯಿಂದ ಕೇರಳದ ಮಂಜೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಮಧ್ಯೆ, ಆರೋಪಿಯನ್ನು ಅರೆಸ್ಟ್ ಮಾಡಿ ಅಂದರೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಯುವತಿ ಆಕ್ರೋಶ ಹೊರಹಾಕಿದ್ದಾಳೆ. ಈ ನಡುವೆ ಅಕ್ಷಯ್ ಮಂಗಳೂರು ಯುವತಿಗೆ ತಾಳಿ ಕಟ್ಟಿದ್ದಾನೆ ಎಂದು ಹೇಳಲಾಗಿದೆ.