ಪುತ್ತೂರು : ರಾಮಮಂದಿರದ ಅಕ್ಷತಾ ವಿತರಣೆ ಸಂಚಾಲಕ ಸಂತೋಷ್ ಮೇಲೆ ಪುತ್ತಿಲ ಪರಿವಾರದಿಂದ ಹಲ್ಲೆ ಆರೋಪ – ಜಾಗದ ವಿಚಾರವಾಗಿ ನಡೆದ ಗಲಾಟೆಯನ್ನು ಪುತ್ತಿಲ ಪರಿವಾರದ ತಲೆಗೆ ಕಟ್ಟಿದ್ರಾ ಸಂತೋಷ್? ದ.ಕ.ಎಸ್ಪಿ ನೀಡಿದ ಮಾಹಿತಿ ಏನು?

ನ್ಯೂಸ್ ಆ್ಯರೋ : ಅಯೋಧ್ಯೆಯ ರಾಮ ಮಂದಿರ ಲೋರ್ಕಾರ್ಪಣೆಯ ನಿಮಿತ್ತ ಮನೆ ಮನೆಗೆ ಅಕ್ಷತೆಯನ್ನು ವಿತರಿಸುವ ಕಾರ್ಯಕ್ರಮದ ಅಕ್ಷತಾ ವಿತರಣೆ ಸಂಚಾಲಕನ ಮೇಲೆ ಪುತ್ತಿಲ ಪರಿವಾರದ ಕಾರ್ಯಕರ್ತರು ಹಲ್ಲೆ ಹಲ್ಲೆ ನಡೆಸಿರುವ ಆರೋಪದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸ್ಪಷ್ಟನೆ ನೀಡಿದ್ದು, ಆಸ್ತಿ ವ್ಯಾಜ್ಯ ಸಂಬಂಧವಾಗಿ ನಡೆದ ಗಲಾಟೆಯನ್ನು ತಿರುಚಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ರಾಮಮಂದಿರದ ಅಕ್ಷತೆ ವಿತರಣಾ ಸಂಚಾಲಕ ಸಂತೋಷ್ ಎಂಬುವವರು ಪುತ್ತೂರಿನ ಮುಂಡೂರು ಎಂಬಲ್ಲಿ ನಿನ್ನೆ ರಾತ್ರಿ ಮನೆ ಮನೆಗೆ ಅಕ್ಷತೆಯನ್ನು ವಿತರಿಸುತ್ತಿದ್ದರು‌. ಈ ವೇಳೆ ನಿನ್ನೆ ಅಕ್ಷತೆ ಹಂಚಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅಕ್ಷತೆಯನ್ನು ಸಂತೋಷ್ ಮನೆಮನೆಗೆ ಹಂಚುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಂಡ ಸಂತೋಷ್ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ತಡೆಯಲು ಬಂದ ತಮ್ಮ ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ‌ ಎಂದು ಖಾಸಗಿ ಆಸ್ಪತ್ರೆಯಲ್ಲಿ ಮಾಧ್ಯಮಗಳ ಮುಂದೆ ಸಂತೋಷ್ ಹೇಳಿಕೆ ನೀಡಿದ್ದರು.

ಸ್ಥಳೀಯ ನಿವಾಸಿ ಧನಂಜಯ್, ಕೇಶವ ಮತ್ತು ಜಗದೀಶ್ ಎಂಬವರ ತಂಡ ಈ ಕೃತ್ಯ ಎಸಗಿದ್ದು, ಆರೋಪಿಗಳು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರು ಎಂದು‌ ಸಂತೋಷ್ ಹೇಳಿಕೆ ನೀಡಿದ್ದರು.

ಆದರೆ ಈ ಘಟನೆ ಜಾಗದ ವಿಚಾರವಾಗಿ ನಡೆದ ಕೃತ್ಯ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದು, ಪುತ್ತೂರು ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಇಲ್ಲಿ ಯಥಾವತ್ತಾಗಿ ವಿವರಿಸಲಾಗಿದೆ.

ಸಂತೋಷ್ ನೀಡಿದ ದೂರಲ್ಲೇನಿದೆ?

ಪ್ರಕರಣದ ಪಿರ್ಯಾದಿದಾರರಾದ ಮುಂಡೂರು ಗ್ರಾಮ ಪುತ್ತೂರು ನಿವಾಸಿ ಸಂತೋಷ ಬಿ ಕೆ ಪ್ರಾಯ (32) ಎಂಬವರ ದೂರಿನಂತೆ, ಫಿರ್ಯಾದಿಯವರು ದಿನಾಂಕ 15/12/2024 ರಂದು ರಾತ್ರಿ ಫಿರ್ಯಾದಿದಾರರು ತಮ್ಮ ಬಾಬು ಆಕ್ಟಿವಾ ಸ್ಕೂಟರ್ ನಲ್ಲಿ ತಮ್ಮ ತೋಟದ ಹತ್ತಿರ ರಾತ್ರಿ ಬಂದು ವಾಹನ ನಿಲ್ಲಿಸಿ, ಅಲ್ಲಿಂದ ತಮ್ಮ ತೋಟದಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ, ಆರೋಪಿಗಳಾದ ಕೇಶವ, ಧನಂಜಯ, ಜಗದೀಶರವರು ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಹಲ್ಲೆ ನಡೆಸಿರುತ್ತಾರೆ.

ಗಲಾಟೆಯ ಶಬ್ದ ಕೇಳಿ ಪಿರ್ಯಾದಿರವರ ತಾಯಿ ಸವಿತಾ ಸ್ಥಳಕ್ಕೆ ಬಂದಾಗ ಆರೋಪಿ ಕೇಶವ ಎಂಬಾತನು ಸವಿತಾರವರಿಗೂ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿ ಹಾಗೂ ಅವರ ತಾಯಿಯನ್ನು ಪಿರ್ಯಾದಿಯವರ ಸಹೋದರ ಸಂದೀಪ ಎಂಬವರು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ನಡೆದ ಗಲಾಟೆಯ ವೇಳೆ ಫಿರ್ಯಾದಿದಾರರ ಮೊಬೈಲ್ ಮತ್ತು 25 ಸಾವಿರ ಹಣವಿದ್ದ ಪರ್ಸ್ ಕಳೆದು ಹೋಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಕ್ರ 07- 2024 00: IPC1860 (Us.341,447,323,324,506,34) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಪ್ರತಿದೂರಿನಲ್ಲಿ ಏನಿದೆ?


ಪ್ರಕರಣದ ಫಿರ್ಯಾದಿದಾರರಾದ ಮುಂಡೂರು ಗ್ರಾಮ ಪುತ್ತೂರು ನಿವಾಸಿ ಕೇಶವ ನಾಯ್ಕ(35), ಎಂಬವರ ದೂರಿನಂತೆ, ಸದ್ರಿಯವರು ದಿನಾಂಕ 15/01/2024 ರಂದು ರಾತ್ರಿ ಸಂದೀಪ ಮತ್ತು ಸಂತೋಷ ರವರ ಪತ್ನಿಯರು ಫಿರ್ಯಾದಿದಾರರ ಜಮೀನಿನ ತಂತಿ ಬೇಲಿಯನ್ನು ಕಿತ್ತು ಹಾಕಲು ಪ್ರಾರಂಭಿಸಿದ್ದು, ಈ ಬಗ್ಗೆ ಕೇಳಿದಾಗ ಫಿರ್ಯಾದಿದಾರರಿಗೆ ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಹಾಕಿರುತ್ತಾರೆ.

ಅಲ್ಲೇ ಇದ್ದ ಕೊರಗಪ್ಪ ನಾಯ್ಕ ಮತ್ತು ಅವರ ಪತ್ನಿ ಸವಿತಾರವರೂ ಕೂಡಾ ಫಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದಿರುತ್ತಾರೆ. ಈ ಬಗ್ಗೆ ದೂರು ನೀಡುವರೇ ಫಿರ್ಯಾದಿದಾರರು ಚಿಕ್ಕಪ್ಪನ ಮಗ ಧನಂಜಯರ ಜೊತೆಗೆ ತೆರಳುತ್ತಿದ್ದಾಗ ಆರೋಪಿ ಕೊರಗಪ್ಪ ನಾಯ್ಕ ರವರ ಮಗ ಸಂತೋಷ ಫಿರ್ಯಾದಿದಾರರ ತಲೆಗೆ ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುತ್ತಾನೆ. ಗಲಾಟೆಯ ಶಬ್ದ ಕೇಳಿ ಫಿರ್ಯಾದಿದಾರರ ತಾಯಿ ಸ್ಥಳಕ್ಕೆ ಬಂದಿದ್ದು, ಅವರಿಗೂ ಸಂತೋಷ ಮತ್ತು ಇನ್ನಿತರರು ಹಲ್ಲೆ ನಡೆಸಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಫಿರ್ಯಾದಿದಾರರನ್ನು ಹಾಗೂ ತಾಯಿ ಜಯಂತಿ, ಧನಂಜಯ್ ಮತ್ತು ಜಗದೀಶ್ ಎಂಬವರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 08-2024 – IPC1860 (U/s. IPC 1860 (U/s-323,324,504,506,34) ಅಡಿ ಪ್ರಕರಣ ದಾಖಲಾಗಿದೆ.