ಕಡಬ : ಚಿಲ್ಲರೆ ಇಲ್ಲವೆಂದು ಸೈನಿಕನ ತಂದೆಯನ್ನೇ KSRTC ಬಸ್ ನಿಂದ ಕೆಳಗಿಳಿಸಿದ ನಿರ್ವಾಹಕ – ಹಿರಿಯ ಜೀವಕ್ಕೆ ಅಗೌರವ ತೋರಿದ ನಿರ್ವಾಹಕನ ವಿರುದ್ಧ ವ್ಯಾಪಕ ಆಕ್ರೋಶ

ನ್ಯೂಸ್ ಆ್ಯರೋ : ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಹಿರಿಯ ನಾಗರೀಕರೊಬ್ಬರನ್ನು ಸರ್ಕಾರಿ ಬಸ್ ನಿರ್ವಾಹಕ ಸುಮಾರು ಎರಡು ಕಿಮೀ ದೂರಕ್ಕೆ ಕ್ರಮಿಸಿದ ಬಸ್ ನಿಂದ ಇಳಿಸಿ ತೆರಳಿದ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ತಾಲ್ಲೂಕು ಕಲ್ಲುಗುಡ್ಡೆ ಶಾಂತಿಗುರಿ ನಿವಾಸಿ ಸುಮಾರು 75 ವರ್ಷ ಪ್ರಾಯದ  ಬಾಬು ಗೌಡರು ಎಂಬ ಹಿರಿಯ ನಾಗರೀಕರಾಗಿದ್ದು ಇಂದು‌ ದಿನಾಂಕ ಜನವರಿ 6 ರಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕಲ್ಲುಗುಡ್ಡೆಯಿಂದ ಕಾಂಚನ ಎಂಬಲ್ಲಿಗೆ  ತೆರಳಲು ಕಲ್ಲುಗುಡ್ಡೆ ಎಂಬಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಹತ್ತಿದ್ದಾರೆ.

ಬೆಳಿಗ್ಗೆ ಒಂಬತ್ತು ಗಂಟೆಗೆ ಕಲ್ಲುಗುಡ್ಡೆ ಯಿಂದ ಹೊರಡುವ ಬಸ್ ಸಂಖ್ಯೆ KA19F3044 ಇದರ ನಿರ್ವಾಹಕರು ಟಿಕೆಟ್ ಗೆ ದುಡ್ಡು ಕೇಳುವಾಗ 200 ರೂ ನೀಡಿದ್ದಾರೆ. ಈ ಸಂದರ್ಭದಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ  ಹಿರಿಯ ನಾಗರಿಕರಾದ ಬಾಬು ಗೌಡ ಅವರನ್ನು ಕಲ್ಲುಗುಡ್ಡೆಯಿಂದ ಎರಡು ಕಿ.ಮೀ ದೂರದಲ್ಲಿ ಗೋಳಿಯಡ್ಕ ಎಂಬಲ್ಲಿ ಬಲವಂತವಾಗಿ ಇಳಿಸಿ ಹಿರಿಯರಿಗೆ ಅಗೌರವ ತೋರಿದ್ದಾರೆ.

ನಮ್ಮ ದೇಶಕಾಯುವ ಯೋಧರೊಬ್ಬರ ತಂದೆಯಾಗಿರುವ ಬಾಬು ಗೌಡರಿಗೆ ಸುಮಾರು 75 ವರ್ಷ ಪ್ರಾಯವಾಗಿದ್ದು,
ನಿರ್ವಾಹಕನ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಬು ಗೌಡ ಅವರು ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿದೆ.

ಸಾರಿಗೆ ಇಲಾಖೆ ಈ ಬಗ್ಗೆ ಗಮನಹರಿಸಿ ನಿರ್ವಾಹಕನ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಇನ್ನು ಮುಂದೆ ಈ ರೀತಿ ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ಚಂದ್ರಶೇಖರ ಕುರಿಯಾಳ ಕೊಪ್ಪ, ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್ ಕಡಬ ಅವರು ಅಗ್ರಹಿಸಿದ್ದಾರೆ.