ಉಳ್ಳಾಲ : ಫ್ಯಾನ್ ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ – ಸ್ನೇಹಿತನ ಜೊತೆ ರಾತ್ರಿ ವೇಳೆ ದೀರ್ಘ ಮಾತುಕತೆ ಕಾರಣವಾ?

ನ್ಯೂಸ್ ಆ್ಯರೋ : ರಾತ್ರಿ ಸ್ನೇಹಿತನ ಜತೆ ಮೊಬೈಲ್ ಸಂಭಾಷಣೆಯಲ್ಲಿದ್ದ ಯುವಕನೊಬ್ಬ ಮಂಗಳವಾರ ಬೆಳಗ್ಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೆಕಾರು ಬಳಿಯ ಮಾಡೂರಿನಲ್ಲಿ ನಡೆದಿದೆ.

ಕೋಟೆಕಾರು ಪಟ್ಟಣದ ಮಾಡೂರು, ಹರಿ ಬಡಾವಣೆ ನಿವಾಸಿ ನಾಗರಾಜ್ ಶೆಟ್ಟಿ(32) ಆತ್ಮಹತ್ಯೆಗೈದ ಯುವಕ. ನಾಗರಾಜ್ ಆನ್ ಲೈನ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ.

ಕಳೆದ ರಾತ್ರಿ ಮನೆ ಸೇರಿದ್ದ ನಾಗರಾಜ್ ತನ್ನ ಕೋಣೆಯೊಳಗೆ ಸ್ನೇಹಿತನೊಂದಿಗೆ ಮೊಬೈಲಿನಲ್ಲಿ ಸುದೀರ್ಘ ಮಾತನಾಡಿ ಮಲಗಿದ್ದ ಎನ್ನಲಾಗಿದೆ. ಬೆಳಗ್ಗೆ ನಾಗರಾಜನ ತಮ್ಮ ನಿಶಾನ್ ರಾಜ್ ಅಣ್ಣನ ಕೋಣೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಾರದಿದ್ದು ಕಿಟಕಿ ಮೂಲಕ ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.

ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಮೃತ ನಾಗರಾಜ್ ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾನೆ.