ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ – ಆಸಕ್ತರು ಕೂಡಲೇ ಈ ರೀತಿ ಅರ್ಜಿ ಹಾಕಿ : ವಿವರ ಇಲ್ಲಿದೆ..

ನ್ಯೂಸ್ ಆ್ಯರೋ : ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಎಲ್ಲಡೆ ಜನರಿಂದ ಅಭೂತಪೂರ್ವ ಸ್ಪಂದನೆ ದೊರೆತಿದೆ‌. ರಾಜ್ಯದ ಎಲ್ಲಾ ನ್ಯಾಯ ಬೆಲೆ ಅಂಗಡಿಗಳೂ ಕೂಡ ಚುರುಕಾಗಿದೆ. ಆದರೆ ಇದರ ನಡುವೆಯೂ ಕೂಡ ರಾಜ್ಯದ ಕೆಲವೊಂದು ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿಗಳ ಕೊರತೆ ಉಂಟಾಗಿದ್ದು, ಇದು ಸರ್ಕಾರದ ಯೋಜನೆಗೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಈ ಸಮಸ್ಯೆ ಪರಿಹರಿಸಲು ಇದೀಗ ಸರ್ಕಾರ ಚಿಂತನೆ ನಡೆಸಿದ್ದು, ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಆದೇಶ ನೀಡಿದೆ. ಆಸಕ್ತರು ಅರ್ಜಿ ಸಲ್ಲಿಸಬಹದಾಗಿದ್ದು, ಈ ಬಗೆಗಿನ ಮಾಹಿತಿ ಇಲ್ಲಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಸದ್ಯ, ರಾಜ್ಯ ಸರ್ಕಾರದ ಆದೇಶದಂತೆ ನ್ಯಾಯ‌ಬೆಲೆ ಅಂಗಡಿ ತೆರೆಯಲು ಆಸಕ್ತಿ ವಹಿಸುವವರು ಸಂಬಂದಪಟ್ಟ ಅರ್ಜಿ ನಮೂನೆ‌ ಹಾಗೂ ದೃಢೀಕರಣ ಪತ್ರಗಳೊಂದಿಗೆ ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿಗೆ ಹೋಗಿ ಪಡೆದು, ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿ ಮೊದಲು ನೀವು ಬಂಡವಾಳ ಹೂಡಿದರೂ ಕೂಡ ಆ ಬಳಿಕ ಸರ್ಕಾರದಿಂದ ಹಲವು ಸವಲತ್ತುಗಳು ನಿಮಗೆ ದೊರೆಯಲಿದೆ.

ನ್ಯಾಯಬೆಲೆ ಅಂಗಡಿಯಿಂದೇನು ಲಾಭ?

ನ್ಯಾಯಬೆಲೆ ಅಂಗಡಿ ತೆರೆಯುವುದರಿಂದ ನಮಗೇನು ಲಾಭ ಎಂದು ನೀವು ಯೋಚಿಸಬಹುದು. ನ್ಯಾಯಬೆಲೆ ಅಂಗಡಿಯಲ್ಲಿ ಕೆಲಸ ಮಾಡುವವರಿಗೆ ಪ್ರತಿ ಕೆಜಿ ದವಸ ಧಾನ್ಯ ಮಾರಾಟಕ್ಕೆ ಇಂತಿಷ್ಟು ಎಂದು ಕಮಿಷನ್ ನೀಡಲಾಗುತ್ತದೆ. ಜೊತೆಗೆ ಇನ್ನು ಕೆಲವೆಡೆ ತಿಂಗಳ ಮೊತ್ತವನ್ನು ಪಾವತಿಸಲಾಗುತ್ತದೆ, ಇದರೊಂದಿಗೆ ಆ ಭಾಗದ ರೇಷನ್ ಕಾರ್ಡ್ ದಾರರ ಆಧಾರದ ಮೇಲೆ ಹೆಚ್ಚುವರಿ ಬೋನಸ್ ಕೂಡ ಸರ್ಕಾರ ನೀಡುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

18 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದ್ದು, ನ್ಯಾಯಬೆಲೆ ಅಂಗಡಿ ಆರಂಭಿಸುವ ಅಭ್ಯರ್ಥಿಗೆ ಕಂಪ್ಯೂಟರ್ ಜ್ಞಾನ ಇರುವುದು ಕಡ್ಡಾಯವಾಗಿದೆ. ಪಡಿತರ ವಿತರಣೆ ಮಾಡಿದ ನಂತರ ಗಣಕೀಕರಣ ಮಾಡುವ ಅಗತ್ಯ ಇರುವುದರಿಂದ ಕಂಪ್ಯೂಟರ್ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಆಸಕ್ತರು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://ahara.kar.nic.in/Home/Home ಅನ್ನು ಪರಿಶೀಲಿಸಬಹುದು.