
ಅ.7ರ ದಾಳಿಯ ರೂವಾರಿಯನ್ನು ಕೊಂದು ಹಾಕಿದ ಇಸ್ರೇಲ್ – ಹಮಾಸ್ ನ ಕಮಾಂಡರ್ ಇಬ್ರಾಹಿಂ ಬಿಯಾರಿ ಇಸ್ರೇಲ್ ದಾಳಿಗೆ ಬಲಿ
- ಅಂತಾರಾಷ್ಟ್ರೀಯ ಸುದ್ದಿ
- November 2, 2023
- No Comment
- 57
ನ್ಯೂಸ್ ಆ್ಯರೋ : ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ತಕ್ಕ ಮಟ್ಟಿಗೆ ಯಶಸ್ಸು ಸಾಧಿಸಿದ್ದು, ಇಸ್ರೇಲ್ ನ ವಾಯುಪಡೆಯು ಹಮಾಸ್ ನ ಕೇಂದ್ರ ಜಬಾಲಿಯಾ ಬೆಟಾಲಿಯನ್ ಕಮಾಂಡರ್ ಇಬ್ರಾಹಿಂ ಬಿಯಾರಿಯನ್ನು ಹತ್ಯೆ ಮಾಡಿದೆ ಎಂದು ಇಸ್ರೇಲ್ ನ ಭದ್ರತಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲಿ ರಕ್ಷಣಾ ಪಡೆಗಳ ಪ್ರಕಾರ, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಇಬ್ರಾಹಿಂ ಬಿಯಾರಿ. ಈ ಉದ್ದೇಶಿತ ದಾಳಿಯು ಈ ಪ್ರದೇಶದಲ್ಲಿ ಹಮಾಸ್ ನ ಕಮಾಂಡ್ ಮತ್ತು ನಿಯಂತ್ರಣವನ್ನು ಅಡ್ಡಿಪಡಿಸಿದ್ದಲ್ಲದೆ, ಬಿಯಾರಿ ಸುತ್ತಮುತ್ತಲಿನ ಗಣನೀಯ ಸಂಖ್ಯೆಯ ಭಯೋತ್ಪಾದಕರನ್ನು ಹತ್ಯೆ ಮಾಡಲು ಕಾರಣವಾಯಿತು ಎಂದು ಐಡಿಎಫ್ ಹೇಳಿಕೊಂಡಿದೆ.
ಹಲವು ವರ್ಷಗಳ ಹಿಂದಿನಿಂದಲೇ ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಬಿಯಾರಿ ಭಾಗಿಯಾಗಿದ್ದ. ಕಳೆದ ಅಕ್ಟೋಬರ್ 7 ರಂದು ನುಖ್ಬಾ ಭಯೋತ್ಪಾದಕರನ್ನು ಇಸ್ರೇಲ್ಗೆ ಕಳುಹಿಸುವಲ್ಲಿ ಆತನ ಪಾತ್ರ ಮುಖ್ಯವಾಗಿತ್ತು.
ಈತ 2004 ರಲ್ಲಿ ಅಶ್ದೋಡ್ ಬಂದರಿನ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ. ಹೆಚ್ಚುವರಿಯಾಗಿ, ಎರಡು ದಶಕಗಳ ಅವಧಿಯಲ್ಲಿ ಇಸ್ರೇಲ್ ಕಡೆಗೆ ರಾಕೆಟ್ ದಾಳಿಗಳನ್ನು ನಿರ್ದೇಶಿಸುವಲ್ಲಿ ಮತ್ತು ಐಡಿಎಫ್ ಪಡೆಗಳ ವಿರುದ್ಧ ದಾಳಿಗಳನ್ನು ಮುನ್ನಡೆಸುವಲ್ಲಿ ಬಿಯಾರಿ ಪ್ರಮುಖ ಪಾತ್ರ ವಹಿಸಿದ್ದ. ಇತ್ತೀಚಿನ ದಿನಗಳಲ್ಲಿ ಉತ್ತರ ಗಾಜಾ ಪಟ್ಟಿಯಲ್ಲಿ ಐಡಿಎಫ್ ಪಡೆಗಳ ವಿರುದ್ಧದ ಹೋರಾಟವನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಎಂದು ಐಡಿಎಫ್ ಹೇಳಿದೆ.