ಹಮಾಸ್ ಉಗ್ರರು ಅಡಗಿ ಕುಳಿತ ಸುರಂಗಕ್ಕೂ ಇಸ್ರೇಲ್ ಕಂಟಕ – ಉಗ್ರರಿಗೆ ಉಸಿರುಗಟ್ಟಿಸೋಕೆ ಇಸ್ರೇಲ್ ಮಾಡಿರೋ ಪ್ಲ್ಯಾನ್ ಏನ್ ಗೊತ್ತಾ..??

ನ್ಯೂಸ್ ಆ್ಯರೋ : ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಿಂದಾಗಿ ಅನೇಕ ಸಾವು-ನೋವು , ನಷ್ಟ ಸಂಭವಿಸಿದರೂ ಲೆಕ್ಕಿಸದೆ ಯುದ್ಧ ನಿಲ್ಲುವುದು ಕಾಣುತ್ತಿಲ್ಲ. ಇಸ್ರೇಲ್ ಸೇನೆ ಗಾಜಾದಲ್ಲಿನ ಹಮಾಸ್ ಉಗ್ರರು ಅವಿತುಕೊಳ್ಳಲು ಬಳಸುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರನ್ನು ಬಿಡಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಹಮಾಸ್ ಉಗ್ರರು ಅವಿತು ಕೂತಿರುವ ಸುರಂಗಕ್ಕೆ ಸಮುದ್ರದ ನೀರು ಹರಿಸಿದ ಇಸ್ರೇಲ್…!

ಹಮಾಸ್ ಉಗ್ರರು ಒತ್ತೆಯಾಳುಗಳನ್ನು, ಯುದ್ಧ ಸಾಮಾಗ್ರಿಗಳನ್ನು ಅಡಗಿಸಲು ಮಾತ್ರವಲ್ಲದೇ ತಾವೂ ಕೂಡಾ ಅವಿತುಕೊಳ್ಳಲು ಸುರಂಗಗಳನ್ನು ಉಪಯೋಗಿಸುತ್ತಿದ್ದಾರೆ. ಅವರ ಈ ಉಪಾಯವನ್ನು ನಾಶಪಡಿಸಲು ಸಮುದ್ರದ ನೀರನ್ನು ಹರಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕೆಲ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ಸಮುದ್ರ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಪಾಯವಾಗಲಿದೆ ಎಂದು ಇತರ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿಗೆ ಇಸ್ರೇಲ್‌ನ ಸೇನೆ ಸದ್ಯ ಪ್ರತಿಕ್ರಿಯೆ ನೀಡಿಲ್ಲ.

ಒಟ್ಟಿನಲ್ಲಿ ಈಗಾಗಲೇ ಯುದ್ಧ, ಗಲಭೆ, ಆಕ್ರೋಶ ಸಾವಿನಿಂದ ಕಂಗೆಟ್ಟಿರುವ ಇಸ್ರೇಲ್ ಹಮಾಸ್ ಉಗ್ರರಿಂದ ಯಾವಾಗ ಮುಕ್ತಿ ಪಡೆಯುತ್ತದೆ ಕಾದುನೋಡಬೇಕು.