ಕಾಂತಾರ ಚಿತ್ರತಂಡಕ್ಕೆ 450 ವರ್ಷ ಹಳೆಯ ಕೊಡಲಿ ನೀಡಲು ಮುಂದಾದ ರಾಜಮನೆತನ – ರಿಷಬ್ ಶೆಟ್ಟಿ ಕೈಯಲ್ಲಿ ರಾರಾಜಿಸಲಿದೆ ಈ ಐತಿಹಾಸಿಕ‌ ಚಂದ್ರಾಯುಧ..!

ನ್ಯೂಸ್ ಆ್ಯರೋ : ಅಪ್ಪಟ ಕನ್ನಡಿಗ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಜಗತ್ತಿನಾದ್ಯಂತ ಮಾಡಿದ ಮೋಡಿಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಕೇವಲ 17 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡಿ ಚಿತ್ರರಂಗದ ದಿಕ್ಕನ್ನೇ ಬದಲಿಸಿ ಬಿಟ್ಟಿತ್ತು.

ಸದ್ಯ, ಈ ಸಿನಿಮಾದ ಯಶಸ್ಸಿನ ಬಳಿಕ ರಿಷಬ್ ಕಾಂತಾರ ಸಿ‌ನಿಮಾದ ಫ್ರೀಕ್ವೆಲ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ‘ಕಾಂತಾರ ಅಧ್ಯಾಯ-1’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಟ್ರೆಂಡಿಂಗ್ ಸೃಷ್ಟಿಸಿತ್ತು. ಈ ಸಿನಿಮಾದಲ್ಲಿ ರಿಷಬ್ ಪಂಜುರ್ಲಿ ದೈವದ ಹುಟ್ಟಿನ ಕತೆ ಹೇಳಲು ಹೊರಟಿದ್ದಾರಂತೆ. ಕರಾವಳಿಯ ಕತೆ ಅಂದಮೇಲೆ ಅಲ್ಲಿ ಪರಶುರಾಮನ ಕತೆ ಇರಲೇ ಬೇಕು. ಪರಶುರಾಮನ ಕೊಡಲಿಯಿಂದ ತುಳುನಾಡು ಹುಟ್ಟಿತು ಎಂಬ ಕತೆಯಿದೆ‌.

ಇದೀಗ ರಿಷಬ್ ಕಾಂತಾರ ಪ್ರೀಕ್ವೆಲ್ ನಲ್ಲಿ ಈ ಕತೆಯನ್ನು ಹೆಣೆದಿದ್ದು, ಇದಕ್ಕಾಗಿ 450 ವರ್ಷದ ಹಳೆಯ ಐತಿಹಾಸಿಕ‌ ಕೊಡಲಿಯನ್ನು ಹುಡುಕಿದ್ದಾರೆ. ಈ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

450ವರ್ಷ ಹಳೆಯ ಐತಿಹಾಸಿಕ‌ ಕೊಡಲಿ!

ಸದ್ಯ, ರಿಷಬ್ ಶೆಟ್ಟಿ ಕೈ ಸೇರಲಿರುವ ಕೊಡಲಿ ಸುಮಾರು 450 ವರ್ಷ ಹಳೆಯದು ಎನ್ನಲಾಗಿದೆ. ಈ ಕೊಡಲಿ ಕಾಸರಗೋಡು ಜಿಲ್ಲೆಯ ಚಿಪ್ಪಾರು ರಾಜಮನೆತನಕ್ಕೆ ಸೇರಿದ್ದು, ಈ ಕೊಡಲಿಯೇ ಪರಶುರಾಮ ಬಳಸಿದ್ದ ಚಂದ್ರಾಯುಧ ಎನ್ನಲಾಗಿದೆ. ಈ ಕೊಡಲಿಯನ್ನು‌ ಗಂಧದ ಹುಡಿಯನ್ನು ಬಳಸಿ ತಯಾರಿಸಲಾಗಿದ್ದು, 450 ವರ್ಷ ಕಳೆದರೂ ಕೂಡ ಈ ಕೊಡಲಿ ಗಟ್ಟಿಮುಟ್ಟಾಗಿದೆಯಂತೆ. ಸದ್ಯ, ಚಿಪ್ಪಾರು ರಾಜಮನೆತನ ಈ‌‌ ಕೊಡಲಿಯನ್ನು ರಿಷಬ್ ಶೆಟ್ಟಿಯವರ ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ ಕೊಡಲು ಮುಂದಾಗಿದೆ.

ರಾಜಮನೆತನದ ಅಭಿಪ್ರಾಯವೇನು?

ಈ ಬಗ್ಗೆ ಮಾತನಾಡಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚಿಪ್ಪಾರು ರಾಜಮನೆತನದ ಹಿರಿಯರಾದ ತಿರುಮಲ ಬಲ್ಲಾಳರು, ‘ಇದು 450 ವರ್ಷಕ್ಕಿಂತಲೂ ಹಳೆಯ ಕೊಡಲಿ. ಇದನ್ನು ಪರಶುರಾಮ ಬಳಸಿದ್ದ ಎನ್ನುವ ಐತಿಹ್ಯವಿದೆ. ನಮ್ಮ ಹಿರಿಯರು ಈ ಕೊಡಲಿಯನ್ನು ಯುದ್ಧ ಹಾಗೂ ಬೇಟೆಗೆ ಬಳಸುತ್ತಿದ್ದರು. ಸದ್ಯ, ರಿಷಬ್ ಶೆಟ್ಟಿ ತುಳುನಾಡಿನ ಮಣ್ಣಿನ ಕತೆಯನ್ನು‌ ಹೇಳಲು ಹೊರಟಿದ್ದು, ಅವರು ಬಯಸುವುದಾದರೆ ಈ ಐತಿಹಾಸಿಕ‌ ಕೊಡಲಿಯನ್ನು ಚಿತ್ರೀಕರಣಕ್ಕಾಗಿ ಕೊಡಲು ನಾವು ಸಿದ್ಧರಾಗಿದ್ದೇವೆ’ ಎನ್ನುತ್ತಾರೆ.

ಕಾಂತಾರ ಅಧ್ಯಾಯ-1!

ಸದ್ಯ, ಕಾಂತಾರ ಸಿನಿಮಾ ಬಳಿಕ ಕಾಂತಾರ ಅಧ್ಯಾಯ-1 ಸಿನಿಮಾ ತಯಾರಾಗುತ್ತಿದ್ದು, ಈ ಸಿನಿಮಾದ ಬಜೆಟ್ ಬರೋಬ್ಬರಿ 110 ಕೋಟಿ ಎನ್ನಲಾಗಿದೆ. ಈ ಸಿನಿಮಾದ ಟೀಸರ್ ಮೊನ್ನೆಯಷ್ಟೇ 7 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ರಿಷಬ್ ಈ ಬಾರಿ 4ನೇ ಶತಮಾನದ ಪಂಜುರ್ಲಿ ದೈವದ ಹುಟ್ಟಿನ ಕತೆಯನ್ನು‌ ಹೇಳಲು ಹೊರಟಿದ್ದಾರಂತೆ. ಸದ್ಯ, ಸ್ಕ್ರಿಪ್ಟ್ ಕೆಲಸಗಳು ಮುಕ್ತಾಯದ ಹಂತ ತಲುಪಿದ್ದು, ರಿಷಬ್ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದ್ದಾರೆ ಎನ್ನಲಾಗಿದೆ.