Vinesh Phogat : ಕುಸ್ತಿ ಆಟಕ್ಕೆ ಚಾಂಪಿಯನ್ ಆಟಗಾರ್ತಿ ಗುಡ್ ಬೈ – ಅನರ್ಹರಾದ ಹತಾಶೆಯಲ್ಲಿ ಕುಸ್ತಿಗೆ ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್
ನ್ಯೂಸ್ ಆ್ಯರೋ : ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಒಲಿಂಪಿಕ್ಸ್ ನ ನಿಯಮಗಳಿಂದಾಗಿ ಕೊನೆ ಕ್ಷಣದಲ್ಲಿ ಕಳೆದುಕೊಂಡ ನೋವಿನಿಂದಾಗಿ ವಿನೇಶ್ ಫೋಗಟ್ ಕುಸ್ತಿ ಆಟಕ್ಕೇ ಗುಡ್ ಬೈ ಹೇಳಿದ್ದು, ನಿವೃತ್ತಿ ಘೋಷಿಸಿದ್ದಾರೆ.
ಕುಸ್ತಿ ನನ್ನ ವಿರುದ್ಧ ಪಂದ್ಯವನ್ನು ಗೆದ್ದಿತು, ನಾನು ಸೋತೆ… ನಿಮ್ಮ ಕನಸುಗಳು ಮತ್ತು ನನ್ನ ಧೈರ್ಯ ಛಿದ್ರವಾಗಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರಿಗೂ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ. ಕ್ಷಮಿಸಿ” ಎಂದು ಅವರು ಎಕ್ಸ್ ನಲ್ಲಿ ಬರೆದಿದ್ದಾರೆ.
ಲೀಗ್ ನಲ್ಲಿ ಚಾಂಪಿಯನ್ ಆಟಗಾರ್ತಿ ಯುಯಿ ಸುಸಾಕಿ ಅವರನ್ನೇ ಮಣಿಸಿ ದ್ವಿತೀಯ ಹಂತಕ್ಕೆ ತೇರ್ಗಡೆ ಹೊಂದಿದ್ದ ವಿನೇಶ್, ಚಿನ್ನ ಗೆಲ್ಲುವ ಫೇವರಿಟ್ ಅನಿಸಿಕೊಂಡಿದ್ದರು. ಆದರೆ ನಿನ್ನೆ ಬೆಳಿಗ್ಗೆ 50 ಕೆಜಿಗಿಂತ 100 ಗ್ರಾಂ ಹೆಚ್ಚು ತೂಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಅವರನ್ನು ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಲಾಗಿತ್ತು.
ಒಲಿಂಪಿಕ್ ಕ್ರೀಡಾಕೂಟದ ಫೈನಲ್ ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 29 ವರ್ಷದ ವಿನೇಶ್ ಪೋಗಟ್, ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಆದರೆ ಈಗ ಕೂಟದಿಂದಲೇ ಹೊರಬಿದ್ದಿದ್ದಾರೆ.
Leave a Comment