ಪ್ರಧಾನ ಮಂತ್ರಿ ಉಚಿತ ಮೊಬೈಲ್ ಯೋಜನೆ; ಮಹಿಳೆಯರಿಗೆ ಫ್ರೀ ಸ್ಮಾರ್ಟ್​ಫೋನ್ ಸಿಗುತ್ತಾ?

Fact Check
Spread the love

ನ್ಯೂಸ್ ಆ್ಯರೋ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೇಳಿಕೆ ವೈರಲ್ ಆಗುತ್ತಿದೆ. ಇದರಲ್ಲಿ ಉಚಿತ ಸ್ಮಾರ್ಟ್​ಫೋನ್ ಯೋಜನೆ ಎಂದು ಹಂಚಿಕೊಳ್ಳಲಾಗುತ್ತಿದೆ. ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನಲ್ಲಿ GavDehatvlogs ಹೆಸರಿನ ಚಾನಲ್‌ನಲ್ಲಿ ಈ ಕುರಿತು ವಿಡಿಯೋ ಅಪ್ಲೋಡ್ ಆಗಿದೆ. ಹಾಗಾದರೆ ಇದು ನಿಜವೇ?, ಪ್ರಧಾನ ಮಂತ್ರಿ ಉಚಿತ ಮೊಬೈಲ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನಿಜಕ್ಕೂ ಫ್ರೀ ಸ್ಮಾರ್ಟ್​ಫೋನ್ ಸಿಗುತ್ತಾ?. ಈ ಕುರಿತ ಮಾಹಿತಿ ಇಲ್ಲಿದೆ.

ವಿಡಿಯೋ ಥಂಬ್‌ನೇಲ್​ನಲ್ಲಿ ಮಹಿಳೆಯರಿಗೆ ಉಚಿತ ಮೊಬೈಲ್ ವಿತರಣೆ ಎಂದು ಬರೆಯಲಾಗಿದೆ. ಜೊತೆಗೆ, ‘‘ಉಚಿತ ಮೊಬೈಲ್ ಯೋಜನೆಯ ಎರಡನೇ ಹಂತದಲ್ಲಿ 70,000 ಮಹಿಳೆಯರು ಉಚಿತ ಮೊಬೈಲ್ ಫೋನ್‌ಗಳನ್ನು ಪಡೆಯುತ್ತಾರೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮೊಬೈಲ್ ವಿತರಣೆ ಆರಂಭವಾಗಿದೆ’’ ಹೇಳಲಾಗಿದೆ. ಈ ಥಂಬ್‌ನೇಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕೂಡ ಸೇರಿದೆ.

ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ ಎಂಬುದು ಕಂಡುಬಂದಿದೆ. ಮೊಬೈಲ್ ವಿತರಣೆ ಸಂಬಂಧಿತ ಕ್ಲೈಮ್ ಅನ್ನು ಕಂಡುಹಿಡಿಯಲು ಮೊದಲು ಗೂಗಲ್​ನಲ್ಲಿ ಕೀವರ್ಡ್‌ ಮೂಲಕ ಸರ್ಚ್ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರದ ಮೊಬೈಲ್ ವಿತರಣೆ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ವಿಶ್ವಾಸಾರ್ಹ ಮಾಧ್ಯಮ ಸಂಸ್ಥೆಯಿಂದ ಯಾವುದೇ ಸುದ್ದಿ ಸಿಕ್ಕಿಲ್ಲ.

ಮಾತ್ರವಲ್ಲದೇ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಪೋಸ್ಟ್ ಅನ್ನು ಎಕ್ಸ್​ನಲ್ಲಿ ಕಂಡುಕೊಂಡಿದ್ದೇವೆ. ಇದರಲ್ಲಿ ಮೊಬೈಲ್ ವಿತರಣೆ ಯೋಜನೆಗೆ ಸಂಬಂಧಿಸಿದ ವೈರಲ್ ಕ್ಲೈಮ್ ಅನ್ನು ನಿರಾಕರಿಸಲಾಗಿದೆ ಮತ್ತು ಅದು ನಕಲಿ ಎಂದು ಕರೆಯಲಾಗಿದೆ. ಪಿಐಬಿ ಪೋಸ್ಟ್‌ನಲ್ಲಿ, ‘‘ಈಗ 70,000 ಮಹಿಳೆಯರು ಪಿಎಂ ಉಚಿತ ಮೊಬೈಲ್ ಯೋಜನೆ 2024 ಅಡಿಯಲ್ಲಿ ಉಚಿತ ಮೊಬೈಲ್ ಫೋನ್‌ಗಳನ್ನು ಪಡೆಯುತ್ತಾರೆ, ಅತ್ಯಾಕರ್ಷಕವಾಗಿದೆ, ಅಲ್ಲವೇ? YT ಚಾನೆಲ್ GavDehatvlogsನ ಈ ವಿಡಿಯೋ ಥಂಬ್‌ನೇಲ್‌ನಲ್ಲಿ ಮಾಡಿದ ಹಕ್ಕುಗಳು ನಕಲಿ, ಕೇಂದ್ರ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ’’ ಎಂದು ಬರೆದುಕೊಂಡಿದೆ.

ಹೀಗಾಗಿ ಉಚಿತ ಮೊಬೈಲ್ ವಿತರಣಾ ಯೋಜನೆಗೆ ಸಂಬಂಧಿಸಿದ ವೈರಲ್ ಹಕ್ಕು ನಕಲಿ ಎಂದು ಪರಿಶೀಲನೆಯಿಂದ ಸ್ಪಷ್ಟವಾಗಿ ತಿಳಿದುಬಂದಿದೆ. ಕೇಂದ್ರ ಸರ್ಕಾರ ಅಂತಹ ಯಾವುದೇ ಯೋಜನೆಯನ್ನು ಶುರುಮಾಡಿಲ್ಲ.

Leave a Comment

Leave a Reply

Your email address will not be published. Required fields are marked *

error: Content is protected !!