
ದುಬಾರಿ ಕಾರಿನಲ್ಲಿ ಬಂದು ಹೂ ಕುಂಡ ಕದ್ದ ಸಿರಿವಂತ ಕಳ್ಳಿಯರು – ವಿಡಿಯೋ ವೈರಲ್, ನೆಟ್ಟಿಗರ ತಪರಾಕಿ..!!
- ವೈರಲ್ ನ್ಯೂಸ್
- November 16, 2023
- No Comment
- 104
ನ್ಯೂಸ್ ಆ್ಯರೋ : ಐಷಾರಾಮಿ ಕಾರಿನಲ್ಲಿ ಬಂದ ಮಹಿಳೆಯರಿಬ್ಬರು ಮನೆ ಮುಂದಿದ್ದ ಹೂ ಕುಂಡವನ್ನು ಕದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಈ ಘಟನೆ ಪಂಜಾಬ್ ನ ಮೊಹಾಲಿಯಲ್ಲಿ ನವೆಂಬರ್ 11ರಂದು ನಡೆದಿದೆ. ಸೆಡಾನ್ ಕಾರಿನಲ್ಲಿ ಬಂದ ಮಹಿಳೆಯರಿಬ್ಬರು ಮನೆ ಮುಂದಿದ್ದ ಹೂ ಕುಂಡ ಎಗ್ಗರಿಸಿ ಪರಾರಿಯಾಗಿದ್ದಾರೆ. ಇವರ ಕಳ್ಳತನದ ಕೃತ್ಯಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ.
ಇದನ್ನು ನೋಡಿದವರು ಇವರಿಗೆ ದುಬಾರಿ ಕಾರು ಖರೀದಿಸಲು ಹಣವಿದೆ. ಆದರೆ ನೂರಿನ್ನೂರು ರೂಪಾಯಿಗೆ ಸಿಗುವ ಹೂ ಕುಂಡ ಕೊಳ್ಳಲು ಕಾಸಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ವೀಡಿಯೋದಲ್ಲಿ ಕಾಣಿಸುವಂತೆ ಇಬ್ಬರು ಮಹಿಳೆಯರು ಕಾರಿನಲ್ಲಿ ಬಂದಿದ್ದು, ಮೊಹಾಲಿಯ ಸೆಕ್ಟರ್ 78ರ ಬಳಿ ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ಅಲ್ಲೇ ಸಮೀಪದ ಮನೆಯ ಗೇಟ್‌ನ ಪಕ್ಕದಲ್ಲಿರುವ ಪಿಲ್ಲರ್ ಮೇಲೆ ಇರಿಸಿದ ಎರಡು ಮೂರು ಹೂ ಕುಂಡಗಳನ್ನು ಎತ್ತಿಕೊಂಡು ಕಾರಿನಲ್ಲಿ ಪರಾರಿಯಾಗುತ್ತಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಮಹಿಳೆಯರ ಮುಖ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಏರಿಯಾದಲ್ಲಿ ಕಳೆದೊಂದು ವಾರದಿಂದ ಇಂತಹದ್ದೇ 10ಕ್ಕೂ ಹೆಚ್ಚು ಘಟನೆಗಳು ನಡೆದ ಬಗ್ಗೆ ವರದಿಯಾಗಿದ್ದು, ಜನ ಏಕೆ ಹೂ ಕುಂಡ ಕದಿಯುವ ಸ್ಪರ್ಧೆಗಿಳಿದಿದ್ದರೋ ತಿಳಿಯುತ್ತಿಲ್ಲ.
ಈ ವರ್ಷದ ಆರಂಭದಲ್ಲೂ ಇದೇ ರೀತಿಯ ಘಟನೆ ದೆಹಲಿ ಗುರುಗ್ರಾಮ್ ಗಡಿ ಭಾಗದಲ್ಲಿ ನಡೆದಿದೆ. ಸ್ವಾಂಕಿ ಕಿಯಾ ಕಾರ್ನಿವಲ್‌ನಲ್ಲಿ ಆಗಮಿಸಿದ ವ್ಯಕ್ತಿಯೊಬ್ಬ ಜಿ.20 ಶೃಂಗದ ಅಂಗವಾಗಿ ಅಲಂಕಾರಕ್ಕೆ ರಸ್ತೆ ಬದಿ ಇರಿಸಿದ್ದ ಹೂ ಕುಂಡಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.