
ಭಾರತ-ಪಾಕ್ ಏಕದಿನ ಕ್ರಿಕೆಟ್ ಪಂದ್ಯ; ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಪೋಸ್ಟ್ ವೈರಲ್ – ಏನಿದರ ವಿಶೇಷತೆ?
- ವೈರಲ್ ನ್ಯೂಸ್
- September 12, 2023
- No Comment
- 101
ನ್ಯೂಸ್ ಆ್ಯರೋ : ಏಷ್ಯಾಕಪ್ ಕ್ರಿಕೆಟ್ ನ ಬಹು ನಿರೀಕ್ಷಿತ, ಹೈ ವೋಲ್ಟೇಜ್ ಭಾರತ-ಪಾಕಿಸ್ತಾನ ಪಂದ್ಯ ಮೀಸಲು ದಿನವಾದ ಸೋಮವಾರ ನಡೆಯಿತು. ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸೂಪರ್-4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ 228 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಕಿಂಗ್ ವಿರಾಟ್ ಕೊಹ್ಲಿ ಅವರ ಅಜೇಯ ಶತಕ, ಸ್ಪಿನ್ನರ್ ಕುಲ್ದೀಪ್ ಯಾದವ್ ಮಾರಕ ದಾಳಿಯ ನೆರವಿನಿಂದ ಭಾರತ ಈ ಬೃಹತ್ ಅಂತರ ಗೆಲುವು ತನ್ನದಾಗಿಸಿಕೊಂಡಿದೆ. ಈ ಗೆಲುವಿನ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡ ರಸ್ತೆ ಸುರಕ್ಷತೆಯ ಪೋಸ್ಟ್ ವೈರಲ್ ಆಗಿದೆ.
ಪೋಸ್ಟ್ ನಲ್ಲಿ ಏನಿದೆ?
ಪಾಕಿಸ್ತಾನ ತಂಡದ ನಾಯಕ, ವಿಶ್ವದ ನಂ. 1 ಬ್ಯಾಟರ್ ಬಾಬರ್ ಅಜಂ ಬೌಲ್ಡ್ ಆಗುತ್ತಿರುವ ಫೋಟೋ ಶೇರ್ ಮಾಡಿದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಖಾತೆ, ‘ನಂ 1 ಬ್ಯಾಟ್ಸ್ ಮನ್ ಆದ್ರೇನು, ನಂ 1 ಡ್ರೈವರ್ ಆದ್ರೇನು ಗಮನ ಕೇಂದ್ರೀಕರಿಸಿ ಡ್ರೈವ್ ಮಾಡದಿದ್ರೆ ಕ್ಲೀನ್ ಬೌಲ್ಡ್ ಆಗ್ತೀರಾ’ ಎಂದು ಬರೆದುಕೊಂಡಿದೆ. ಸದ್ಯ ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.
ಬಾಬರ್ ಅಜಂ ಸೋಮವಾರದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಎಸೆತವನ್ನು ಗುರುತಿಸುವಲ್ಲಿ ವಿಫಲರಾಗಿ ಕೇವಲ 10 ರನ್ ಗಳಿಸಿ ಬೌಲ್ಡ್ ಆಗಿದ್ದರು. ವಾಹನ ಚಾಲನೆ ವೇಳೆ ಸರಿಯಾಗಿ ಗಮನ ಹರಿಸದಿದ್ದರೆ ಇದೇ ರೀತಿಯಲ್ಲಿ ಅಪಘಾತ ಸಂಭವಿಸುತ್ತದೆ ಎನ್ನುವುದನ್ನು ತಿಳಿಸಲು ಪೊಲೀಸರು ಇದನ್ನು ಉದಾಹರಣೆಯಾಗಿ ಬಳಸಿಕೊಂಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಸದ್ಯ 40 ಸಾವಿರಕ್ಕಿಂತ ಅಧಿಕ ಮಂದಿ ಈ ಪೋಸ್ಟ್ ಅನ್ನು ವೀಕ್ಷಿಸಿದ್ದಾರೆ.
ಈ ಪೋಸ್ಟ್ ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಸೂಪರ್ ಕ್ಯಾಪ್ಶನ್ ಎಂದು ಒಬ್ಬರು ಹೇಳಿದರೆ, ನಿಜ ಸರ್ ಎಂದು ಇನ್ನೊಬ್ಬರು ಸಮ್ಮತಿಸಿದ್ದಾರೆ. ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ ಎಂದು ಮತ್ತೊಬ್ಬರು ರಿಪ್ಲೈ ಮಾಡಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಈ ಸೃಜನಾತ್ಮಕತೆ ಗಮನ ಸೆಳೆಯುವ ಜೊತೆಗೆ ಒಂದಷ್ಟು ಜನರಲ್ಲಿ ಜಾಗೃತಿಯನ್ನೂ ಮೂಡಿಸಿದೆ.
ಇನ್ನೊಂದು ವೈರಲ್ ಪೋಸ್ಟ್
ಈ ಮಧ್ಯೆ ಭಾರತ ತಂಡದ ಸ್ಪಿನ್ನರ್ ರವೀಂದ್ರ ಜಡೇಜಾ ಎಸೆದ ಚೆಂಡು ಬ್ಯಾಟಿಂಗ್ ವೇಳೆ ಪಾಕ್ ಆಟಗಾರ ಆಘಾ ಸಲ್ಮಾನ್ ನ ಮುಖಕ್ಕೆ ಬಡಿದು ರಕ್ತಸ್ರಾವ ಉಂಟಾಗಿತ್ತು. ಈ ಸಂದರ್ಭದಲ್ಲಿ ಸಲ್ಮಾನ್ ಹೆಲ್ಮೆಟ್ ಧರಿಸಿರಲಿಲ್ಲ. ಈ ಫೋಟೋವನ್ನೂ ಬಳಸಿಕೊಂಡ ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸರು ಹೆಲ್ಮೆಟ್ ಧರಿಸದಿದ್ದರೆ ನರಕ ದರ್ಶನವಾಗುತ್ತದೆ ಎಂದು ಪೋಸ್ಟ್ ಮಾಡಿ ದ್ವಿಚಕ್ರ ಸವಾರರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ.