
ಜಲಾಶಯಕ್ಕೆ ಕೈ ಜಾರಿ ಬಿತ್ತು ಲಕ್ಷ ರೂಪಾಯಿ ಬೆಲೆಯ ಮೊಬೈಲ್ – ಜಲಾಶಯದ 41 ಲಕ್ಷ ಲೀಟರ್ ನೀರನ್ನು ಹೊರತೆಗೆಸಿದ ಅಧಿಕಾರಿ ಸಸ್ಪೆಂಡ್, ಏನಿದು ಘಟನೆ?
- Viral News
- May 27, 2023
- No Comment
- 159
ನ್ಯೂಸ್ ಆ್ಯರೋ : ಸರಕಾರಿ ಅಧಿಕಾರಿಯೊಬ್ಬ ಜಲಾಶಯದಲ್ಲಿ ಬಿದ್ದಿದ್ದ ತನ್ನ ದುಬಾರಿ ಮೊಬೈಲ್ ಫೋನ್ ಅನ್ನು ಮರುಪಡೆಯುವುದಕ್ಕಾಗಿ ಜಲಾಶಯದಿಂದ ಬರೋಬ್ಬರಿ 41 ಲಕ್ಷ ಲೀಟರ್ ನೀರನ್ನು ಪಂಪ್ ಮಾಡುವ ಮೂಲಕ ಖಾಲಿ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.
ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ ಅವರು ಖೇರ್ಕಟ್ಟಾ ಅಣೆಕಟ್ಟಿನಲ್ಲಿ ಕುಳಿತು ರಜೆಯನ್ನು ಆನಂದಿಸುತ್ತಿದ್ದಾಗ ಆಕಸ್ಮಿಕವಾಗಿ 1 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ಫೋನ್ 15 ಅಡಿ ಆಳದ ನೀರಿನಿಂದ ತುಂಬಿರುವ ಪ್ರದೇಶದಲ್ಲಿ ಬಿದ್ದಿದೆ. ನಂತರ ಸ್ಥಳೀಯರು ಧುಮುಕಿದರೂ ಮೊಬೈಲ್ ಪತ್ತೆಯಾಗಿಲ್ಲ. ಆದ್ದರಿಂದ ಅಧಿಕಾರಿಯು ಮೂರು ದಿನಗಳ ಕಾಲ ನಿರಂತರವಾಗಿ ಎರಡು 30hp ಡೀಸೆಲ್ ಪಂಪ್‌ಗಳನ್ನು ಬಳಸಿ 41 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮೂರು ದಿನಗಳ ಕಾಲ ಅಂದರೆ ಸೋಮವಾರ ಸಂಜೆಯಿಂದ ಗುರುವಾರದವರೆಗೆ ಪಂಪ್ ಬಳಸಿ ನೀರು ಹೊರ ತೆಗೆಯಲಾಗಿದೆ. ಅಂತಿಮವಾಗಿ ದೂರಿನ ಮೇರೆಗೆ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಡೆದಿದ್ದಾರೆ. ಆದರೆ, ಅದಾಗಲೇ ಆರು ಅಡಿ ಆಳದವರೆಗೆ ಅಂದರೆ ಸುಮಾರು 21 ಲಕ್ಷ ಲೀಟರ್ ನೀರನ್ನು ಅದಾಗಲೇ ಪಂಪ್ ಮಾಡಲಾಗಿತ್ತು. ಘಟನೆಯ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೇಶ್ ‘ನೀರು ಬಳಕೆಗೆ ಯೋಗ್ಯವಾಗಿಲ್ಲ. ಜೊತೆಗೆ ಸ್ಥಳೀಯ ಉಪವಿಭಾಗಾಧಿಕಾರಿಯಿಂದ ಪೂರ್ವ ಮೌಖಿಕ ಅನುಮತಿಯನ್ನು ಪಡೆದಿದ್ದೆ’ ಎಂದು ತಿಳಿಸಿದ್ದಾರೆ.