Flying using cooking oil! Virgin who created history

ಇದೇನಪ್ಪಾ..! ಅಡುಗೆ ಎಣ್ಣೆ ಬಳಸಿ ವಿಮಾನ ಹಾರಾಟ..! – ಹಿಸ್ಟರಿ ಸೃಷ್ಟಿಸಿತು ವರ್ಜಿನ್ ಅಟ್ಲಾಂಟಿಕ್ ಏರ್ ಲೈನ್ಸ್…!

ನ್ಯೂಸ್ ಆ್ಯರೋ : ಡೀಸೆಲ್ ನಿಂದ ಚಲಿಸಬೇಕಾದ ವಾಹನಗಳಿಗೆ ನಾವು ಪೆಟ್ರೋಲ್ ಹಾಕಿದರೆ ಅದು ಚಲಿಸದು‌‌. ಹಾಗೆಯೇ ಪ್ರತಿಯೊಂದು ವಾಹನಕ್ಕೂ ಅದರದ್ದೇ ಆದ ಮಿತಿಗಳಿರುತ್ತದೆ. ಉದಾಹರಣೆಗೆ ರೈಲಿಗೆ ಪೆಟ್ರೋಲ್ ಹಾಕಿ ಓಡಿಸುತ್ತೇನೆಂದರೆ ಅದು ಸಾಧ್ಯವೇ..? ಆದರೆ ಇಲ್ಲಿ ಮಾತ್ರ ನಡೆದಿರೋದು ಅಚ್ಚರಿ ಸಂಗತಿ.

ಅಡುಗೆ ಎಣ್ಣೆ ಬಳಸಿ ವಿಮಾನ ಹಾರಿಸಲಾಗಿದೆ ಅಂದ್ರೆ ನಂಬ್ತೀರಾ..?ನಂಬಲೇಬೇಕು…! ವರ್ಜಿನ್ ಅಟ್ಲಾಂಟಿಕ್ ಏರ್‌ಲೈನ್ಸ್‌ ಸಂಸ್ಥೆಗೆ ಸೇರಿದ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನ ಶೇ.100ದಷ್ಟು ಅಡುಗೆ ಎಣ್ಣೆಯನ್ನೇ ಇಂಧನವಾಗಿ ಬಳಸಿ ಹಾರಾಟ ನಡೆಸಿದ ಮೊದಲ ವಾಣಿಜ್ಯ ವಿಮಾನ ಎಂಬ ದಾಖಲೆ ಬರೆದಿದೆ.

ಲಂಡನ್‌ನಿಂದ ನ್ಯೂಯಾರ್ಕ್‌ಗೆ ಪ್ರಯಾಣ

ಈ ವಿಮಾನವು ಲಂಡನ್​ನ ಹೀಥ್ರೂದಿಂದ ನ್ಯೂಯಾರ್ಕ್​ನ ಜಾನ್ ಎಫ್ ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿತು. ಈ ಮೂಲಕ ಜೆಟ್ ಇಂಧನವನ್ನು ಬಳಸದೇ ಶೇ. ನೂರರಷ್ಟು ಅಡುಗೆ ತೈಲವನ್ನೇ (ಸಸ್ಟೈನಬಲ್ ಏವಿಯೇಷನ್ ​​ಫ್ಯೂಯಲ್) ಇಂಧನವಾಗಿ ಬಳಸಿ 38 ಸಾವಿರ ಅಡಿ ಎತ್ತರದಲ್ಲಿ, ಅಟ್ಲಾಂಟಿಕ್ ಸಾಗರದ ಮೂಲಕ ಹಾರಾಟ ನಡೆಸಿ ಇತಿಹಾಸ ಬರೆಯಿತು ಎಂದು ಏರ್‌ಲೈನ್ಸ್ ಬಹಿರಂಗಪಡಿಸಿದೆ.

ಕೆಲವೇ ಸಿಬ್ಬಂದಿಯೊಂದಿಗೆ ಹಾರಾಟ:

ವಿಮಾನದಲ್ಲಿ ವರ್ಜಿನ್ ಅಟ್ಲಾಂಟಿಕ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಮತ್ತು ಸಾರಿಗೆ ಕಾರ್ಯದರ್ಶಿ ಮಾರ್ಕ್ ಹಾರ್ಪರ್ ಸೇರಿದಂತೆ ಕೆಲವೇ ಸಿಬ್ಬಂದಿ ಮಾತ್ರ ಪ್ರಯಾಣಿಸಿದ್ದಾರೆ. ಈ ಹಿಂದೆ ರಾಯಲ್ ಏರ್‌ಫೋರ್ಸ್ ಕಾರ್ಗೋ ಏರ್‌ಕ್ರಾಫ್ಟ್ ಕೂಡಾ ಸಸ್ಟೈನಬಲ್ ಏವಿಯೇಷನ್ ​​ಫ್ಯೂಯಲ್​ನಿಂದ ಹಾರಾಟ ನಡೆಸಿತ್ತು. ಆದರೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಅಡುಗೆ ಎಣ್ಣೆಯಿಂದಲೇ ಓಡಿದ ಮೊದಲ ಪ್ರಯಾಣಿಕ ವಿಮಾನ ಇದಾಗಿದೆ.

SAF ಎಂದರೇನು?

ವಿಮಾನಗಳು ಸಾಮಾನ್ಯವಾಗಿ ಜೆಟ್ ಇಂಧನದಲ್ಲಿ ಸಂಚರಿಸುತ್ತವೆ. ಆದರೆ, ಈ ಇಂಧನದಿಂದ ಹೊರಬರುವ ಇಂಗಾಲದ ಹೊರಸೂಸುವಿಕೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಪರ್ಯಾಯ ಇಂಧನಗಳ ಹುಡುಕಾಟ ಮುಂದುವರಿದಿದೆ. ಇದರ ಭಾಗವಾಗಿ, ಇಂಧನ ಕಂಪನಿಗಳು ಸಸ್ಟೈನಬಲ್ ಏವಿಯೇಷನ್ ​​ಫ್ಯೂಯಲ್ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿವೆ.

SAF ಯಾವುದರಿಂದ ಮಾಡಲ್ಪಟ್ಟಿದೆ?

ಸುಸ್ಥಿರ ವಾಯುಯಾನ ಇಂಧನವನ್ನು ಪುನರುತ್ಪಾದನ ಜೀವರಾಶಿ (ಬಯೋಮಾಸ್​), ತ್ಯಾಜ್ಯ ಮತ್ತು ಕ್ಯಾಮೆಲಿನಾ ಸೇರಿದಂತೆ ವಿವಿಧ ವಸ್ತುಗಳಿಂದ ತಯಾರಿಸಲಾಗುತ್ತದೆ. ಅಲ್ಲದೆ ಅಡುಗೆ ಮಾಡಿದ ನಂತರ ಉಳಿಯುವ ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳನ್ನೂ ಸಹ ಇದಕ್ಕಾಗಿ ಬಳಸಲಾಗುತ್ತದೆ. ವಾಸ್ತವವಾಗಿ ಸಾಂಪ್ರದಾಯಿಕ ಜೆಟ್ ಇಂಧನದಲ್ಲಿ, SAF ಅನ್ನು ಗರಿಷ್ಠ ಶೇ 50ವರೆಗೆ ಬಳಸಬಹುದು. 2011ರಲ್ಲಿ ವಾಣಿಜ್ಯ ವಿಮಾನಗಳಿಗೂ SAF ಬಳಸಲು ಅನುಮೋದನೆ ನೀಡಲಾಗಿತ್ತು.