ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್- ಕಮಲಾ ಹ್ಯಾರಿಸ್ ಮಧ್ಯೆ ಗೆಲ್ಲುವುದು ಯಾರು?

Trump vs Harris
Spread the love

ನ್ಯೂಸ್ ಆ್ಯರೋ: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇಂದು ಮಂಗಳವಾರ ನಡೆಯಲಿದೆ. ಶ್ವೇತಭವನದಲ್ಲಿ ಮುಂದಿನ 4 ವರ್ಷಗಳಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ನಡುವೆ ನಿಕಟ ಸ್ಪರ್ಧೆ ನಡೆಯುತ್ತಿದೆ.

ಅಮೆರಿಕ ರಾಜಕೀಯ ವೇದಿಕೆಯಲ್ಲಿ ಇಷ್ಟು ದಿನ ನಡೆದ ರಾಜಕೀಯ ಆರೋಪ-ಪ್ರತ್ಯಾರೋಪ, ಪೈಪೋಟಿಗೆ ಇಂದು ನಿರ್ಣಾಯಕ ದಿನವಾಗಿದೆ. ಅಮೆರಿಕನ್ನರು ಇಂದು ದೇಶದ 47 ನೇ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ನಾಳೆ ಬೆಳಗ್ಗೆ 6.30ಕ್ಕೆ (ಅಮೆರಿಕದ ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ) ಅಂತ್ಯವಾಗಲಿದೆ.

ತಮ್ಮ ಪ್ರಚಾರದ ಕೊನೆಯ ದಿನಗಳಲ್ಲಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಮೆರಿಕಾದ ಭರವಸೆ, ಏಕತೆ, ಆಶಾವಾದ ಮತ್ತು ಮಹಿಳಾ ಹಕ್ಕುಗಳ ಸಂದೇಶದ ಮೇಲೆ ಕೇಂದ್ರೀಕರಿಸಿದರು ಆದರೆ ಟ್ರಂಪ್ ತಮ್ಮ ಡೆಮಾಕ್ರಟಿಕ್ ಪ್ರತಿಸ್ಪರ್ಧಿಯನ್ನು ಗುರಿಯಾಗಿಸುವಲ್ಲಿ ತೀವ್ರವಾಗಿ ಹೋರಾಡುತ್ತಿದ್ದರು, ತಾವು ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಈ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಒಟ್ಟಾರೆಯಾಗಿ, ಇದು 60 ವರ್ಷದ ಕಮಲಾ ಹ್ಯಾರಿಸ್ ಮತ್ತು 78 ವರ್ಷದ ಡೊನಾಲ್ಡ್ ಟ್ರಂಪ್ ಇಬ್ಬರಿಗೂ ಹಗ್ಗದ ಮೇಲಿನ ನಡಿಗೆ ರೀತಿ ಆಗಿದೆ.

ಮತದಾನ ಪೂರ್ವ ಸಮೀಕ್ಷೆಗಳಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಚುನಾವಣೆಯಲ್ಲಿ ನಿರ್ಣಾಯಕ ಎನಿಸಿರುವ ‘ಸ್ವಿಂಗ್‌ ರಾಜ್ಯ’ಗಳಲ್ಲಿ ರಿಪಬ್ಲಿಕನ್‌ ಅಭ್ಯರ್ಥಿ ಪರ ಹೆಚ್ಚಿನ ಒಲವು ಕಂಡು ಬಂದಿದ್ದು, 4 ವರ್ಷಗಳ ಬಳಿಕ ಟ್ರಂಪ್‌ ಅವರು ಮರಳಿ ಶ್ವೇತಭವನ ಪ್ರವೇಶಿಸಬಹುದು ಎಂದು ವಿಶ್ಲೇಷಿಸಲಾಗಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇ .49ರಷ್ಟು ಜನ ಟ್ರಂಪ್‌ ಪರ, ಶೇ. 47.2ರಷ್ಟು ಜನ ಕಮಲಾ ಹ್ಯಾರಿಸ್‌ ಪರ ಒಲವು ತೋರಿಸಿದ್ದಾರೆ. ಇಬ್ಬರ ನಡುವಿನ ಮತಗಳ ಅಂತರ ಶೇ. 1.8ರಷ್ಟಿದೆ.

ಸ್ವಿಂಗ್‌ ರಾಜ್ಯಗಳೆಂದರೆ ಅಮೆರಿಕ ಅಧ್ಯಕ್ಷರ ಗೆಲುವಿಗೆ ನಿರ್ಣಾಯಕವಾದ ರಾಜ್ಯಗಳಾಗಿದ್ದು, ಆರಿಜೋನಾ, ಜಾರ್ಜಿಯಾ, ಮಿಶಿಗನ್‌, ನೆವಾಡಾ, ನಾರ್ತ್‌ ಕೆರೊಲಿನಾ, ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್‌ನಲ್ಲಿ ಕಮಲಾ ಹ್ಯಾರಿಸ್‌ ಅವರಿಗಿಂತ ಟ್ರಂಪ್‌ ಹೆಚ್ಚಿನ ಬೆಂಬಲ ಗಿಟ್ಟಿಸಿಕೊಂಡಿದ್ದಾರೆ. ಈ ಹಿಂದೆ 2016ರಲ್ಲಿ ಟ್ರಂಪ್‌, 2020ರಲ್ಲಿ ಜೊ ಬೈಡನ್‌ ಗೆಲುವಿಗೆ ಸ್ವಿಂಗ್‌ ರಾಜ್ಯಗಳ ಮತಗಳೇ ಕಾರಣವಾಗಿದ್ದವು.

ಜನವರಿ 6 ರಂದು ಮತ ಎಣಿಕೆ ನಡೆಯಲಿದೆ, ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ರಂದು ಅಧಿಕಾರ ಗದ್ದುಗೆ ಏರುತ್ತಾರೆ. ನವೆಂಬರ್​ನಲ್ಲಿ ಆಯ್ಕೆಯಾದ ಎಲೆಕ್ಟ್ರರ್ಸ್​ ಡಿಸೆಂಬರ್​ ಮೊದಲ ಬುಧವಾರದ ನಂತರದ ಮಂಗಳವಾರದಂದು ತಮ್ಮ ರಾಜ್ಯಗಳಲ್ಲಿ ಭೇಟಿಯಾಗುತ್ತಾರೆ. ಆಗ ಅಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲಾಗುತ್ತದೆ ಮತ್ತು ಸಹಿ ಮಾಡಿದ ಪ್ರಮಾಣಪತ್ರಗಳನ್ನು ವಾಷಿಂಗ್ಟನ್​ ಡಿಸಿಗೆ ಕಳುಹಿಸಲಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!