ಬೀದರ್ ಬೆನ್ನಲ್ಲೇ ಮಂಗಳೂರು ಬ್ಯಾಂಕ್‌ನಲ್ಲಿ ದರೋಡೆ; ಬಂದೂಕು ತೋರಿಸಿ ನಗದು ದೋಚಿ ಪರಾರಿಯಾದ ಕಳ್ಳರು
ನ್ಯೂಸ್ ಆ್ಯರೋ: ಕೋಟೆಕಾರ್ ಬ್ಯಾಂಕ್‌ನ ಕೆ.ಸಿ.ರೋಡ್ ಶಾಖೆಯಿಂದ ಭಾರೀ ದರೋಡೆ ನಡೆದಿದೆ. ಹಾಡಹಗಲೇ ಐದು ಮಂದಿ ಆಗಂತುಕರು ಬಂದೂಕು ತೋರಿಸಿ ಕೃತ್ಯ ಎಸಗಿದ್ದಾರೆ. ಫಿಯೇಟ್ ಕಾರಿನಲ್ಲಿ ಬಂದ ತಂಡ ಚಿನ್ನ, ನಗದುಗಳನ್ನು ದೋಚಿ ಪರಾರಿಯಾಗಿದೆ.
ಬ್ಯಾಂಕಿನಿಂದ 15 ಕೋಟಿ ರೂ.ಗೂ ಮಿಕ್ಕಿದ ಚಿನ್ನ ಹಾಗೂ ಐದು ಲಕ್ಷದಷ್ಟು ನಗದನ್ನು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ದರೋಡೆ ನಡೆಸಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ, ಮತ್ತೋರ್ವ ಸಿಸಿಟಿವಿ ಟೆಕ್ನೀಷಿಯನ್‌ಗೆ ಬಂದೂಕು ಹಾಗೂ ತಲವಾರು ತೋರಿಸಿದ ಮಾಸ್ಕ್ ಧರಿಸಿದ್ದ ತಂಡ ಸುಮ್ಮನಿರುವಂತೆ ಬೆದರಿಸಿ, ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿ ಲಾಕರ್ ನಲ್ಲಿದ್ದ 15 ಕೋಟಿ ರೂ. ಚಿನ್ನ ಹಾಗೂ 5 ಲಕ್ಷ ರೂ ನಷ್ಟು ನಗದು ದೋಚಿ ಗ್ರೇ ಬಣ್ಣದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಕೆ.ಸಿ ರೋಡ್ ಜಂಕ್ಷನ್ ಶುಕ್ರವಾರವಾದ ಹಿನ್ನೆಲೆಯಲ್ಲಿ ಹೆಚ್ಚು ಜನರಿರಲಿಲ್ಲ.
ಇನ್ನು ಸ್ಪೀಕರ್ ಯುಟಿ ಖಾದರ್ ಕೂಡ ತಮ್ಮ ಕ್ಷೇತ್ರದ ಬ್ಯಾಂಕ್‌ನಲ್ಲಿ ನಡೆದ ಘಟನೆ ಗಮನಕ್ಕೆ ಬರುತ್ತಿದ್ದಂತೆ, ಬ್ಯಾಂಕ್ ಗೆ ಭೇಟಿ ನೀಡಿ, ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
Leave a Comment