National Space Day : ಚಂದ್ರನ ಅಂಗಳದಲ್ಲಿ ಭಾರತ ವಿಕ್ರಮ – ಇಂದು ದೇಶಾದ್ಯಂತ ಚಂದ್ರಯಾನ್ 3 ಸವಿನೆನಪು

20240823 092648
Spread the love

ನ್ಯೂಸ್ ಆ್ಯರೋ‌ : ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಶುಕ್ರವಾರ ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ ಎಸ್. ಸೋಮನಾಥ ಹೇಳಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸ್ಮರಣಾರ್ಥವಾಗಿ ಆ. 23ನ್ನು ರಾಷ್ಟ್ರೀಯ ಬಾಹ್ಯಾ ಕಾಶ ದಿನವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿತ್ತು.

1969ರಲ್ಲಿ ಸ್ಥಾಪನೆಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) 55 ವರ್ಷಗಳಿಂದ ಬಾಹ್ಯಾಕಾಶ ಸಂಶೋಧನೆಯಲ್ಲಿ ಅಗಾಧ ಸಾಧನೆ ಮೆರೆದಿದೆ. ಹಲವು ಉಪಗ್ರಹಗಳ ಮೂಲಕ ಭಾರತದ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜತೆಗೆ ಬಾಹ್ಯಾಕಾಶ ಸಾಧನೆಗಳ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ.

ಇಸ್ರೋದ ಹಲವಾರು ಸಾಧನೆಗಳ ಪೈಕಿ ಈಗಲೂ ಚಂದ್ರಯಾನ ಸರಣಿ ಮಿಷನ್‌ಗಳು ವಿಶಿಷ್ಟವಾಗಿವೆ. ಕಳೆದ ವರ್ಷ 23ರಂದು ಚಂದ್ರನಯಾನ-3 ಮಿಷನ್‌ನ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಬಳಿಕ ಈ ಸಾಧನೆ ಮಾಡಿದ ಮೊದಲ ರಾಷ್ಟ್ರ ಎನಿಸಿ ಕೊಂಡಿತು. ಭಾರತದ ಪ್ರಗತಿಯ ಪಯಣದಲ್ಲಿ ಇದೊಂದು ಗಮನಾರ್ಹ ಮೈಲುಗಲ್ಲು. ಈ ಮಹತ್ವದ ದಿನ ಸ್ಮರಣೀಯವಾಗಿಸುವ ಉದ್ದೇಶ ದಿಂದ ಪ್ರತಿವರ್ಷದ ಆ. 23ರ ದಿನವನ್ನು “ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲು ಭಾರತ ಸರಕಾರ ಘೋಷಿಸಿದ್ದು, ಪ್ರಸಕ್ತ ವರ್ಷವೇ ಮೊದಲ ಆಚರಣೆ ಇಂದು ನಡೆಯಲಿದೆ.

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಅಭಿಯಾನದ ರೂಪದಲ್ಲಿ ವಿವಿಧ ಚಟುವಟಿಕೆಗಳು ಆಯೋಜನೆಗೊಂಡಿವೆ. ಈ ದಿನ ಹೊಸದಿಲ್ಲಿಯ ಭಾರತ ಮಂಟಪದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರದರ್ಶನ, ವಿಚಾರಗೋಷ್ಠಿ, ಕಾರ್ಯಾಗಾರ, ಚಂದ್ರಯಾನ-3 ಸಾಕ್ಷ್ಯಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬಾಹ್ಯಾಕಾಶ ದಿನ ಹಿನ್ನೆಲೆ ರೊಬೊಟಿಕ್ಸ್‌ ಚಾಲೆಂಜ್, ಭಾರತೀಯ ಅಂತರಿಕ್ಷ ಹ್ಯಾಕಥಾನ್‌ ಸ್ಪರ್ಧೆ ಕೂಡ ನಡೆದಿದ್ದವು. ಅದರ ಪ್ರಶಸ್ತಿ ಪ್ರದಾನ ಈ ದಿನ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. “ಸ್ಪೇಸ್‌ ಆನ್‌ ವೀಲ್ಸ್…’ ಯೋಜನೆ ಮೂಲಕ ಬಾಹ್ಯಾಕಾಶದ ಸಾಧನೆಗಳ ರೂಪಕಗಳನ್ನು ಶಾಲಾ- ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಾಹ್ಯಾಕಾಶ ಶಿಕ್ಷಣದ ಜಾಗೃತಿಗಾಗಿ ಚರ್ಚೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ಆಯೋಜನೆಗೊಂಡಿವೆ.

ಚಂದ್ರಯಾನ 4-5 ವಿನ್ಯಾಸ ಪೂರ್ಣಗೊಂಡಿದ್ದು, ಅದಕ್ಕಾಗಿ ಸರ್ಕಾರದ ಅನುಮೋದನೆಯನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಚಂದ್ರಯಾನ-4 ಮಿಷನ್ ಕೂಡ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುವ ಗುರಿ ಹೊಂದಿದೆ. ಜತೆಗೆ ಚಂದ್ರನ ಕಲ್ಲುಗಳು ಮತ್ತು ಮಣ್ಣನ್ನು ಭೂಮಿಗೆ ಮರಳಿ ತರುವುದು ಇದರ ಉದ್ದೇಶವಾಗಿದೆ. ಚಂದ್ರನಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವುದು, ಚಂದ್ರನ ಕಕ್ಷೆಯಲ್ಲಿ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು ನಡೆಸುವುದು ಇನ್ನಿತರ ಪ್ರಯೋಗಗಳನ್ನು ಚಂದ್ರಯಾನ ಯೋಜನೆ ಒಳಗೊಂಡಿದೆ ಎಂದು ಸೋಮನಾಥ ಮಾಹಿತಿ ನೀಡಿದ್ದಾರೆ. ‌

ಚಂದ್ರಯಾನ-3ಕ್ಕಿಂತ ಮೊದಲು 2019ರ ಜುಲೈ 22ರಂದು ಚಂದ್ರಯಾನ-2ಕ್ಕೆ ಚಾಲನೆ ನೀಡಲಾಗಿತ್ತು. ನಿಗದಿಯಂತೆ ಸೆ. 6ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸಬೇಕಿತ್ತು. ಗುರಿ ತಲುಪಲು ಕೇವಲ 2.1 ಕಿ.ಮೀ. ಬಾಕಿ ಇರುವಾಗ ಲ್ಯಾಂಡರ್‌ನ ಅವರೋಹಣ ವೇಗ ಕಡಿಮೆಯಾಗಲಿಲ್ಲ. ಕೊನೇ ಕ್ಷಣದಲ್ಲಾದ ಸಾಫ್ಟ್ವೇರ್‌ ದೋಷದಿಂದ ಲ್ಯಾಂಡರ್‌ ಪತನಗೊಂಡಿತು. ಇಸ್ರೋ ಮಾತ್ರವಲ್ಲದೇ ಇಡೀ ದೇಶ ಈ ವೈಫ‌ಲ್ಯಕ್ಕೆ ಮರುಗಿತು. ಲ್ಯಾಂಡರ್‌ ಎಂಜಿನ್‌ ಮೇಲಿದ್ದ ಒತ್ತಡ, ವೇಗ ಕಡಿಮೆಗೊಳ್ಳದಿರುವುದು, ಸಾಫ್ಟ್ವೇರ್‌ ದೋಷ, ಲ್ಯಾಂಡಿಂಗ್‌ ಸೈಟ್‌ನಲ್ಲಿ ಇಳಿಯಲು ಇದ್ದ ಕಠಿನತೆ ಹೀಗೆ ಹಲವು ದೋಷಗಳಿಂದ ಚಂದ್ರಯಾನ-2 ವಿಫ‌ಲಗೊಂಡಿತು. 2008ರಲ್ಲಿ ಕೈಗೊಂಡ ಚಂದ್ರಯಾನ 1 ಯಶಸ್ವಿಯಾಗಿತ್ತು.

ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡರ್‌ ಹಾಗೂ ರೋವರ್‌ ಕಳಿಸುವುದು ಮತ್ತು ಸುರಕ್ಷಿತ ಹಾಗೂ ಸಾಫ್ಟ್ ಲ್ಯಾಂಡಿಂಗ್‌, ರೋವರ್‌ ಸಂಚಾರ, ಆ ಮೂಲಕ ಸ್ಥಳದಲ್ಲಿನ ವೈಜ್ಞಾನಿಕ ಪ್ರಯೋಗ, ಸಂಶೋಧನೆ ನಡೆಸುವುದು ಚಂದ್ರಯಾನ-3ರ ಉದ್ದೇಶವಾಗಿತ್ತು. 2023 ಜುಲೈ 14ರಂದು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಹೊತ್ತ ರಾಕೆಟ್‌ ಉಡಾವಣೆಗೊಂಡಿತು.

ಅದೇ ವರ್ಷ ಆ. 5ರಂದು ಚಂದ್ರನ ಕಕ್ಷೆಗೆ ಸೇರ್ಪಡೆಯಾಯಿತು. ಆ. 17ರಂದು ವಾಹಕದಿಂದ ಲ್ಯಾಂಡರ್‌ ಪ್ರತ್ಯೇಕವಾಗಿ ಮುಂದೆ ಆ.23ರಂದು ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಿತು. ಈ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ನಾಮಕರಣ ಮಾಡಲಾಯಿತು.

ಮರುದಿನ ತನ್ನ ಕಾರ್ಯಾರಂಭ ಮಾಡಿದ ಪ್ರಜ್ಞಾನ್‌ ರೋವರ್‌, ಹಲವು ಮಾಹಿತಿ ಕಲೆಹಾಕಿ, ಆ.30ರಂದು ಚಂದ್ರನಲ್ಲಿ ಗಂಧಕ ಇರುವಿಕೆ ಪತ್ತೆ ಹಚ್ಚಿತು. ತನಗೆ ವಹಿಸಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ ಬಳಿಕ ಪ್ರಜ್ಞಾನ್‌ ರೋವರ್‌ ಅನ್ನು ಸೆ.2 ಹಾಗೂ ವಿಕ್ರಮ್‌ ಲ್ಯಾಂಡರ್‌ನ್ನು ಸೆ.4ರಂದು ಸ್ಲೀಪ್‌ ಮೋಡ್‌ಗೆ ಹಾಕಲಾಯಿತು.

20240823 0923174271519735626379624
20240823 0923293799938813161473813
20240823 0920546598865619227662718
20240823 0920492230367358838762143
20240823 0920516572715328753164278
20240823 0920538572906070665216089

14 ದಿನಗಳ ಬಳಿಕ ಸೂರ್ಯನ ಬೆಳಕಿನಿಂದ ಅವುಗಳು ಮತ್ತೆ ಕಾರ್ಯೋನ್ಮುಖವಾ­ಗಬಹುದೆಂದು ನಿರೀಕ್ಷೆ ಮಾಡಲಾಗಿತ್ತಾದರೂ, ಹಲವು ಪ್ರಯತ್ನ ಗಳ ಬಳಿಕ ಲ್ಯಾಂಡರ್‌ ಹಾಗೂ ರೋವರ್‌ ಸ್ಪಂದಿಸಲಿಲ್ಲ. ಹೀಗೆ ಚಂದ್ರ­ಯಾನ-3 ಯಶಸ್ವಿಯಾಗುವುದಲ್ಲದೇ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಚಂದ್ರನ ಮೇಲೆ ಭಾರತದ ಶಾಶ್ವತ ರಾಯಭಾರಿಗಳಾದವು.

Leave a Comment

Leave a Reply

Your email address will not be published. Required fields are marked *

error: Content is protected !!