
ವಾಟ್ಸಾಪ್ ಇಂಡಿಯಾದ ಮುಖ್ಯಸ್ಥ ಸ್ಥಾನಕ್ಕೆ ಗುಡ್ ಬೈ ಹೇಳಿದ ಅಭಿಜಿತ್ ಬೋಸ್ – ಅಚ್ಚರಿ ಮೂಡಿಸಿದ ದಿಢೀರ್ ಬೆಳವಣಿಗೆ..!!
- ಟೆಕ್ ನ್ಯೂಸ್
- November 17, 2022
- No Comment
- 493
ನ್ಯೂಸ್ ಆ್ಯರೋ : ಸಾಮಾಜಿಕ ಜಾಲತಾಣದ ಅತೀ ನೆಚ್ಚಿನ ಮೆಸೇಜ್ ಆ್ಯಪ್ ಗಳಲ್ಲಿ ವಾಟ್ಸಾಪ್ ಒಂದಾಗಿದ್ದು, ಇದೀಗ ವಾಟ್ಸಾಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಹಾಗೂ ಮೆಟಾ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥ ರಾಜೀವ್ ಅಗರ್ವಾಲ್ ಇಬ್ಬರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾ ಸಂಸ್ಥೆಯು ತಿಳಿಸಿದೆ.
ಜಗತ್ತಿನಾದ್ಯಂತ ಮೆಟಾ ಸಂಸ್ಥೆ 11,000 ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಯು ನಡೆಯುತ್ತಿರುವಾಗಲೇ ಈ ಸುದ್ದಿ ಹೊರಬಿದ್ದಿರುವುದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ವಾಟ್ಸಾಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಅವರು ಮತ್ತೊಂದು ಅವಕಾಶವನ್ನು ಮುಂದುವರಿಸಲು ಮೆಟಾದಲ್ಲಿನ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಮೆಟಾ ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ವಾಟ್ಸಾಪ್‌ನ ಮೊದಲ ಮುಖ್ಯಸ್ಥರಾಗಿ ಅಭಿಜಿತ್ ಬೋಸ್ ಅವರ ಅನನ್ಯ ಕೊಡುಗೆಗಳಿಗಾಗಿ ಧನ್ಯವಾದಗಳು. ಅವರ ಉದ್ಯಮಶೀಲ ಪ್ರಯತ್ನವು ನಮ್ಮ ತಂಡವು ಲಕ್ಷಾಂತರ ಜನರು ಮತ್ತು ವ್ಯವಹಾರಗಳಿಗೆ ಪ್ರಯೋಜನಕಾರಿಯಾದ ಹೊಸ ಸೇವೆಗಳನ್ನು ನೀಡಲು ಸಹಾಯ ಮಾಡಿದೆ. ಭಾರತಕ್ಕಾಗಿ ವಾಟ್ಸಾಪ್ ಇನ್ನೂ ಹೆಚ್ಚಿನದನ್ನು ಮಾಡಬಹುದು. ಭಾರತದ ಡಿಜಿಟಲ್ ರೂಪಾಂತರವನ್ನು ಮುಂದುವರಿಸಲು ಸಹಾಯ ಮಾಡುವುದನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವಾರವಷ್ಟೇ, ‘ಮೆಟಾ’ ಸಂಸ್ಥೆಗೆ ಭಾರತದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದ ‘ಅಜಿತ್ ಮೋಹನ್’ ಅವರು ಸಹ ರಾಜೀನಾಮೆ ಸಲ್ಲಿಸಿದ್ದರು. 2019 ರ ಜನವರಿಯಿಂದ ಮೆಟಾ ಸಂಸ್ಥೆಯ ಭಾರತದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅಜಿತ್ ಮೋಹನ್ ಅವರು ಕಂಪನಿಯ ಹೊರಗೆ ಮತ್ತೊಂದು ಅವಕಾಶವನ್ನು ಪಡೆಯುವ ಸಲುವಾಗಿ ಮೆಟಾದಲ್ಲಿನ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ಮೆಟಾ ಸಂಸ್ಥೆಯ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್‌ನ ಉಪಾಧ್ಯಕ್ಷ ನಿಕೋಲಾ ಮೆಂಡೆಲ್ಸೋನ್ ಅವರು ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.