ಸಿಕ್ಕಾಪಟ್ಟೆ ಟ್ರೋಲ್ ಆದ ಸುದೀಪ್ ಪುತ್ರಿ ಸಾನ್ವಿ; ಮೊದಲು ಮಗಳಿಗೆ ಉಪದೇಶ ಮಾಡಿ ಎಂದ ನೆಟ್ಟಿಗರು
ನ್ಯೂಸ್ ಆ್ಯರೋ: ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ, ಏಕಾಏಕಿ ಸುದೀಪ್ ಮಗಳ ಮೇಲೆ ನೆಟ್ಟಿಗರು ಕೋಪಗೊಂಡಿದ್ದು ಏಕೆ? ಅವರು ಮಾಡಿದ ತಪ್ಪೇನು? ಆ ಎಲ್ಲಾ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿ ಉತ್ತರ ಸಿಗಲಿದೆ. ಸುದೀಪ್ ಅವರು ಈ ವಿಚಾರವಾಗಿ ಏನಾದರೂ ಸ್ಪಷ್ಟನೆ ನೀಡುತ್ತಾರಾ ಎನ್ನುವ ಕುತೂಹಲವೂ ಇದೆ.
ಇತ್ತೀಚೆಗೆ ಜೀ ಕನ್ನಡದ ‘ಸರಿಗಮಪ’ ವೇದಿಕೆ ಮೇಲೆ ಕಿಚ್ಚ ಸುದೀಪ್, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಆಗಮಿಸಿದ್ದರು. ಈ ವೇಳೆ ಸಾನ್ವಿ ಅವರು ತಂದೆಗಾಗಿ, ‘ಜಸ್ಟ್ ಮಾತ್ ಮಾತಲ್ಲಿ..’ ಹಾಡನ್ನು ಸುಮಧುರವಾಗಿ ಹಾಡಿದರು. ಈ ಹಾಡಿನ ಬಳಿಕ ಅವರು ಸಂಪೂರ್ಣವಾಗಿ ಮಾತನಾಡಿದ್ದು ಇಂಗ್ಲಿಷ್ನಲ್ಲಿ. ‘ಪ್ರತಿವರ್ಷ’ ಎಂಬ ಶಬ್ದ ಬಿಟ್ಟು ಅವರು ಮತ್ತೆಲ್ಲಿಯೂ ಕನ್ನಡ ಶಬ್ದ ಮಾತನಾಡಿಲ್ಲ. ಇದು ಟ್ರೋಲ್ಗೆ ಕಾರಣವಾದ ವಿಚಾರ.
ಕಿಚ್ಚ ಸುದೀಪ್ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಬಿಗ್ ಬಾಸ್ನಲ್ಲಿ ಕನ್ನಡಕ್ಕೆ ಗೌರವ ನೀಡದ ಸಂದರ್ಭದಲ್ಲಿ ಅವರು ಇದನ್ನು ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಸ್ಪರ್ಧಿಗಳು ಇಂಗ್ಲಿಷ್ ಮಾತನಾಡಿದಾಗ ಅದನ್ನು ಪ್ರಶ್ನೆ ಮಾಡಬೇಕು ಮತ್ತು ಕನ್ನಡ ಬಳಕೆ ಹೆಚ್ಚುವಂತೆ ಆಗಬೇಕು ಎಂದು ಸುದೀಪ್ ಅವರು ಬಿಗ್ ಬಾಸ್ ಆಯೋಜಕರ ಬಳಿ ಒತ್ತಾಯಿಸಿದ್ದರು ಎನ್ನಲಾಗಿದೆ.
ಪರಭಾಷಾ ಸಂದರ್ಶನಗಳಲ್ಲಿ ಯಾರಾದರೂ ‘ಕನ್ನಡ್’ ಎಂದರೆ ‘ಅದು ಕನ್ನಡ್ ಅಲ್ಲ ಕನ್ನಡ’ ಎಂದು ತಿದ್ದುವ ಕೆಲಸ ಮಾಡಿದ್ದಾರೆ. ಆದರೆ, ಕನ್ನಡ ರಿಯಾಲಿಟಿ ಶೋನಲ್ಲಿ ಮಗಳಿಗೇಕೆ ಅವರು ಕನ್ನಡ ಮಾತನಾಡುವಂತೆ ಒತ್ತಾಯಿಸಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾ ಇದ್ದಾರೆ.
Leave a Comment