
HSRP ಅಳವಡಿಸಲು ಮತ್ತಷ್ಟು ಗಡುವು ನೀಡಲು ತೀರ್ಮಾನಿಸಿದ ಸಾರಿಗೆ ಇಲಾಖೆ – ಅಧಿಕೃತ ಆದೇಶವಷ್ಟೇ ಬಾಕಿ, ನಂಬರ್ ಪ್ಲೇಟ್ ಅಳವಡಿಕೆ ಹೇಗೆ?
- ಕರ್ನಾಟಕ
- October 26, 2023
- No Comment
- 120
ನ್ಯೂಸ್ ಆ್ಯರೋ : 2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಗಳನ್ನು (ಎಚ್ಎಸ್ಆರ್ಪಿ) ಅಳವಡಿಸಲು ನಿಗದಿಪಡಿಸಲಾಗಿದ್ದ ಗಡುವನ್ನು ಪುನಃ 2 ಅಥವಾ 3 ತಿಂಗಳು ವಿಸ್ತರಣೆ ಮಾಡಲು ಸಾರಿಗೆ ಇಲಾಖೆ ತೀರ್ಮಾನಿಸಿದ್ದು, ನವೆಂಬರ್ ಮೊದಲ ವಾರದಲ್ಲಿ ಆದೇಶ ಹೊರಬೀಳಲಿದೆ.
ಎಚ್ಎಸ್ಆರ್ಪಿ ಹಾಕಿಸಲು ಸಾರಿಗೆ ಇಲಾಖೆ ನ.17ರ ಗಡುವು ವಿಧಿಸಿತ್ತು. ಆದರೆ, ಹೊಸದಾಗಿ ನಾಮಫಲಕ ಅಳವಡಿಸಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ. ಈವರೆಗೂ ರಾಜ್ಯದಲ್ಲಿ ಬರೀ 2.30 ಲಕ್ಷ ವಾಹನಗಳಿಗೆ ಮಾತ್ರ ಎಚ್ಎಸ್ಆರ್ಪಿ ಅಳವಡಿಸಲಾಗಿದೆ. 1950ರಿಂದಲೂ ಆಗಿರುವ ನೋಂದಣಿ ಪ್ರಕಾರ ರಾಜ್ಯದಲ್ಲಿ 2.15 ಕೋಟಿ ಹಳೇ ವಾಹನಗಳಿವೆ. 2019ರಿಂದ ಹಿಂದಿನ 15 ವರ್ಷದಲ್ಲಿ ನೋಂದಣಿಯಾಗಿರುವ ವಾಹನಗಳ ಲೆಕ್ಕ ತೆಗೆದುಕೊಂಡರೆ ಅಂದಾಜು 1.70 ಕೋಟಿ ವಾಹನಗಳಿವೆ.
ಸದ್ಯ ನಿಗದಿಪಡಿಸಿರುವ ನ.17ರ ಒಳಗೆ ಒಂದೂವರೆ ಕೋಟಿ ವಾಹನಗಳಿಗೆ ನಾಮಫಲಕ ಅಳವಡಿಕೆ ಸಾಧ್ಯವಿಲ್ಲ. ಹೀಗಾಗಿ 2 ಅಥವಾ 3 ತಿಂಗಳು ಅವಧಿ ವಿಸ್ತರಿಸುವ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಮಾತುಕತೆ ನಡೆದಿದೆ. ಎಚ್ಎಸ್ಆರ್ಪಿ ಅಳವಡಿಸಲು ರಾಜ್ಯಾದ್ಯಂತ 4000ಕ್ಕೂ ಅಧಿಕ ಡೀಲರ್ ಪಾಯಿಂಟ್ಗಳನ್ನು ಸಾರಿಗೆ ಇಲಾಖೆ ಗುರುತಿಸಿದೆ.