ವ್ಯಾಲೆಂಟೆನ್ಸ್ ಡೇ ದಿನ ಸಿಗಲ್ವಂತೆ ಮದ್ಯ…! – ಈ ಖಡಕ್ ಆದೇಶದ ಹಿಂದಿರೋದು ಇದೇ ಕಾರಣ ಅಂತೆ…!

ನ್ಯೂಸ್ ಆ್ಯರೋ : ಪ್ರೇಮಿಗಳ ದಿನವೇನೋ ಶೀಘ್ರದಲ್ಲೇ ಸಮೀಪಿಸುತ್ತಿದೆ. ಪ್ರತೀ ಬಾರಿ ಈ ಸಂದರ್ಭ ಏನಾದರೊಂದು ವಾಗ್ವಾದಗಳು ನಡೆಯುತ್ತಲೇ ಇರುತ್ತದೆ. ಪೊಲೀಸ್ ಇಲಾಖೆ ಕೂಡಾ ಅಲರ್ಟ್ ಆಗಿ ಈ ದಿನ ಕಾರ್ಯಾಚರಿಸುತ್ತಿರುತ್ತದೆ. ಇನ್ನು ಬರುವ ಫೆ. 14ರಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಫೆಬ್ರವರಿ 14ರ ಸಂಜೆ 5 ರಿಂದ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಫೆಬ್ರವರಿ 14ರ ಸಂಜೆ 5 ರಿಂದ ಫೆಬ್ರವರಿ 17 ರ ಬೆಳಗ್ಗೆ 6 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಕರಾವಳಿ ಭಾಗದಲ್ಲಿ ಏನ್ ಕಥೆ..?

ದ.ಕ ಜಿಲ್ಲೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಯಿಂದಲೋ ಅಥವಾ ಪೊಲೀಸ್ ಇಲಾಖೆಯಿಂದಲೋ ಅಧಿಕೃತ ಸೂಚನೆ ಬಂದಿಲ್ಲ. ಆದರೆ ಪ್ರತೀ ಬಾರಿ ಈ ಪ್ರೇಮಿಗಳ ದಿನವನ್ನು ಬಹಿಷ್ಕರಿಸುತ್ತಲೇ ಬಂದಿರುವ ಹಿಂದೂ ಸಂಘಟನೆಗಳ ನಡೆ ಮತ್ತು ಈ ಬಾರಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ನೋಡಬೇಕಷ್ಟೆ.‌

ಆದರೆ ಪ್ರತೀ ಬಾರಿ ಕರಾವಳಿ ಭಾಗದಲ್ಲಿ ಯಾವುದಾದರೊಂದು ಸಣ್ಣಪುಟ್ಟ ಗಲಭೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಪೊಲೀಸ್ ಪಡೆ ಈ ಬಾರಿಯೂ ಕೂಡಾ ಅಲರ್ಟ್ ಆಗಿ ಸಮಾಜದ ಸ್ವಾಸ್ಥ್ಯ ಹಾಳುಗೆಡಹದಂತೆ ಕಾರ್ಯಾಚರಣೆ ನಡೆಸಲಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಫೆ.14ರಂದು ರಾಜಧಾನಿಯಲ್ಲಿ ಮದ್ಯ ಬಂದ್ ಯಾಕೆ..?

ನಿಗದಿಯಾಗಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್ತಿನ ಉಪಚುನಾವಣೆಯಿಂದಾಗಿ (ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ) ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಬೆಂಗಳೂರು ನಗರ ಉಪ ಆಯುಕ್ತ ಕೆ.ಎ.ದಯಾನಂದ ಅವರು ಈ ಆದೇಶ ಹೊರಡಿಸಿದ್ದು, 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 135(ಸಿ) ಅಡಿಯಲ್ಲಿ ಮತ್ತು ಕರ್ನಾಟಕ ಅಬಕಾರಿ ನಿಯಮಗಳು, 1967 ನಿಯಮ 10(ಬಿ) ಪರಿಗಣಿಸಿ ಆದೇಶ ಹೊರಡಿಸಲಾಗಿದೆ.

ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಒಟ್ಟಾರೆ ಪ್ರೇಮಿಗಳ ದಿನದಿಂದ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ರಾಜ್ಯ ರಾಜಧಾನಿಯ ಮದ್ಯಪ್ರಿಯರ ಮೇಲೆ ಪರಿಣಾಮ ಬೀರಲಿದೆ.