ಗಮನಿಸಿ: ಇಂದಿನಿಂದ ಡಿ.22ರವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರವಿಲ್ಲ – ಕಾರಣ ಏನ್ ಗೊತ್ತಾ..?

ನ್ಯೂಸ್ ಆ್ಯರೋ : ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಜನ ಕೆಲವರು ಬಸ್ಸನ್ನು ಆಯ್ಕೆ ಮಾಡಿಕೊಂಡರೆ ಕಡಿಮೆ ದರದಲ್ಲಿ ಆಗುತ್ತದೆ ಎಂಬ ವಿಚಾರಕ್ಕೆ ರೈಲನ್ನು ಪ್ರಿಫರ್ ಮಾಡುತ್ತಾರೆ. ಆದರೆ ಇದೀಗ ರೈಲ್ವೆ ಇಲಾಖೆ ಮಹತ್ತರ ವಿಷಯವೊಂದನ್ನು ಘೋಷಣೆ ಮಾಡಿದೆ.

ಮಂಗಳೂರು- ಬೆಂಗಳೂರು ನಡುವಿನ ರೈಲು ಸಂಚಾರ ಇಂದಿನಿಂದ ಡಿಸೆಂಬರ್ 22ರ ತನಕ ರದ್ದುಗೊಂಡಿದೆ. ಈ ಕುರಿತು ಪ್ರಕಟಣೆ ನೀಡಿರುವ ನೈಋತ್ಯ ರೈಲ್ವೆ, ಆರು ರೈಲುಗಳ ಸಂಚಾರದಲ್ಲಿ ಈ ವ್ಯತ್ಯಾಸ ಉಂಟಾಗಿದೆ ಎಂದು ತಿಳಿಸಿದೆ. ಇದರ ವಿವರ ಇಲ್ಲಿದೆ.

ಹಾಸನ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣ ಕಾಮಗಾರಿಗಾಗಿ ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಡಿಸೆಂಬರ್ 14 ರಿಂದ 18 ರ ಅವಧಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 6 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 8 ರವರೆಗೆ ಲೈನ್ ಬ್ಲಾಕ್, ಸಿಗ್ನಲ್ ಮತ್ತು ದೂರಸಂಪರ್ಕ ಬ್ಲಾಕ್ ಕೆಲಸಗಳು ಆಗುತ್ತವೆ.

ಈ ಸಮಯದಲ್ಲಿ ರೈಲು ಸಂಚಾರಕ್ಕೆ ಹಾಸನದಲ್ಲಿ ಯಾವುದೇ ರೈಲು ಮಾರ್ಗಗಳು ಲಭ್ಯವಿರುವುದಿಲ್ಲ. ಡಿಸೆಂಬರ್ 19 ರಿಂದ ಡಿಸೆಂಬರ್ 22 ರವರೆಗೆ, ಎಂಜಿನಿಯರಿಂಗ್ ಕೆಲಸಕ್ಕಾಗಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಟ್ರಾಫಿಕ್ ಬ್ಲಾಕ್ ಅನ್ನು ಮಾಡಲಾಗುವುದು ಮತ್ತು ಈ ಅವಧಿಯಲ್ಲಿ ಯಾವುದೇ ರೈಲುಗಳು ಕಾರ್ಯನಿರ್ವಹಿಸುವುದಿಲ್ಲ.

ಈ ಅವಧಿಯಲ್ಲಿ ಹಾಸನ ಜಂಕ್ಷನ್ ಯಾರ್ಡ್ ನಲ್ಲಿ ಸಿಗ್ನಲಿಂಗ್, ಇಂಟರ್ಲಾಕ್ ಮತ್ತು ಇತರ ಇಂಜಿನಿಯರಿಂಗ್ ವ್ಯವಸ್ಥೆ ಮರುವಿನ್ಯಾಸಗೊಳಿಸುವ ಕೆಲಸ ನಡೆಯಲಿದೆ. ಈ ಕಾರಣದಿಂದ ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ.

ರದ್ದುಗೊಂಡ ರೈಲುಗಳ ವಿವರ ಹೀಗಿದೆ:

  1. ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ (ಪ್ರತಿ ರಾತ್ರಿ ಸಂಚರಿಸುವ ರೈಲು) – ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದು.
  2. ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ (ಪ್ರತಿ ರಾತ್ರಿ ಸಂಚರಿಸುವ ರೈಲು) – ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದು.
  3. ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ (ವಾರಕ್ಕೆ ಮೂರು ದಿನ ಸಂಚರಿಸುವ) ಎಕ್ಸ್‌ಪ್ರೆಸ್ – ಡಿಸೆಂಬರ್ 14, 17, 19 ಮತ್ತು 21 ರಂದು ರದ್ದು.
  4. ಯಶವಂತಪುರ-ಕಾರವಾರ (ವಾರಕ್ಕೆ ಮೂರು ದಿನ ಸಂಚರಿಸುವ) ಎಕ್ಸ್‌ಪ್ರೆಸ್ – ಡಿಸೆಂಬರ್ 13, 15, 18, 20 ಮತ್ತು 22 ರಂದು ರದ್ದು.
  5. ಯಶವಂತಪುರ-ಮಂಗಳೂರು ಜಂಕ್ಷನ್ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) – ಡಿಸೆಂಬರ್ 16 ರಂದು ರದ್ದು.
  6. ಮಂಗಳೂರು ಜಂಕ್ಷನ್-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) – ಡಿಸೆಂಬರ್ 17 ರಂದು ರದ್ದು.

ಡಿ. 22ರ ನಂತರ ಎಂದಿನಂತೆ ಮಂಗಳೂರು- ಬೆಂಗಳೂರು ರೈಲು ನಿತ್ಯ ಸಂಚರಿಸಲಿದೆ. ಪ್ರಯಾಣಿಕರು ಈ ಮಾಹಿತಿಯನ್ನು ಗಮನಿಸಬೇಕಾಗಿದೆ.