ಬಿಜೆಪಿ ಟಿಕೆಟ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ – ಚೈತ್ರಾ ಮತ್ತಾಕೆಯ ಗೆಳೆಯನಿಗೆ ಜಾಮೀನು, ಇಂದು ಬಿಡುಗಡೆ ಸಾಧ್ಯತೆ

ನ್ಯೂಸ್ ಆ್ಯರೋ : ವಿಧಾನಸಭಾ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಹೊಟೇಲ್‌ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಸಹಿತ ಇಬ್ಬರಿಗೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್ನಲ್ಲಿ ಚೈತ್ರಾ ಪರ ವಕೀಲ ಹರ್ಷ ಮುತಾಲಿಕ್ ಅವರು ವಾದ ಮಂಡಿಸಿದ್ದರು. ಇದನ್ನು ಆಲಿಸಿದ ನ್ಯಾಯಾಲಯವು ಚೈತ್ರಾ ಹಾಗೂ ಶ್ರೀಕಾಂತ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ, ಬೆಂಗಳೂರು ಬಿಟ್ಟು ತೆರಳಬಾರದು ಎಂದು ಆದೇಶವನ್ನು ಹೊರಡಿಸಲಾಗಿದೆ. ಜೊತೆಗೆ, ಸಾಕ್ಷಿಗಳ ನಾಶಕ್ಕೆ ಅಥವಾ ಆರೋಪಿಗಳ ವಿರುದ್ಧ ಇರುವ ಸಾಕ್ಷಿದಾರರ ಮೇಲೆ ಪ್ರಭಾವ ಬೀರದಂತೆ ಷರತ್ತು ಹಾಕಲಾಗಿದೆ.

ಇನ್ನು ಚೈತ್ರಾ, ಶ್ರೀಕಾಂತ್‌ಗೆ ನಿನ್ನೆ ಜಾಮೀನು ಸಿಕ್ಕಿದ್ದರೂ ನಿನ್ನೆಯೇ ಜೈಲಿನಿಂದ ಬಿಡುಗೆ ಆಗುವ ಭಾಗ್ಯ ಸಿಗಲಿಲ್ಲ. ನ್ಯಾಯಾಲಯ ವಿಧಿಸಿದ್ದ 1 ಲಕ್ಷ ರೂ. ಬಾಂಡ್ ಹಾಗೂ ಇಬ್ಬರ ಶೂರಿಟಿ ಇಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಚೈತ್ರಾಳ ಜೈಲಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಇಂದು ನ್ಯಾಯಾಲಯದ ಅವಧಿಯಲ್ಲಿ ಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಪೂರೈಸಿದ ನಂತರ ಪರಪ್ಪನ ಅಗ್ರಹಾರ ಜೈಲಿನಿಂದ‌ ಚೈತ್ರಾ ಮತ್ತು ಶ್ರೀಕಾಂತ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಸದ್ಯ ಈ ವಂಚನೆ ಪ್ರಕರಣದಲ್ಲಿ ಮೂವರಿಗೆ ಜಾಮೀನು ಸಿಕ್ಕಂತಾಗಿದೆ. ಈ ಹಿಂದೆ ಹೊಸಕೋಟೆಯ ಹಾಲಶ್ರೀ ಸ್ವಾಮೀಜಿಗೆ ಜಾಮೀನು ಸಿಕ್ಕಿತ್ತು.

ಉದ್ಯಮಿ ಗೋವಿಂದ ಬಾಬು ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಹಿಂದೂ ಕಾರ್ಯಕರ್ತೆ ಚೈತ್ರಾಳನ್ನು ಸೆಪ್ಟೆಂಬರ್ 13 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಒಟ್ಟು 4 ಕೋಟಿ ರೂ. ಹಣ ಪಡೆದಿದ್ದಳು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್​ ಸಿಕ್ಕಿರಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಮತ್ತು ಗ್ಯಾಂಗ್ ಹಣ ನೀಡದೇ ವಂಚಿಸಿತ್ತು. ಈ ಬಗ್ಗೆ ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಚೈತ್ರಾ ಸೇರಿದಂತೆ ಆಕೆಯ ಗ್ಯಾಂಗ್ ಅನ್ನು ಹೆಡೆಮುರಿಕಟ್ಟಿದ್ದರು.