
ಅನಾರೋಗ್ಯದಿಂದ ಖ್ಯಾತ ಆಹಾರ ತಜ್ಞ ಕೆ.ಸಿ.ರಘು ವಿಧಿವಶ – ಸಾರ್ವಜನಿಕರ ಆರೋಗ್ಯಕ್ಕೆ ಸಲಹೆ ನೀಡುತ್ತಿದ್ದ ತಜ್ಞರಿಗೆ ಇದೇನಾಯ್ತು?
- ಕರ್ನಾಟಕ
- October 15, 2023
- No Comment
- 145
ನ್ಯೂಸ್ ಆ್ಯರೋ : ನಾಡಿನ ಖ್ಯಾತ ಆಹಾರ ತಜ್ಞ ಕೆ.ಸಿ ರಘು (60) ಅವರು ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಖಾಸಗಿ ವಾಹಿನಿಗಳಲ್ಲಿ ಹಾಗೂ ಅಂಕಣದ ಮೂಲಕ ಆಹಾರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ, ಜನರಲ್ಲಿ ಅರಿವು ಮೂಡಿಸುತ್ತಿದ್ದರು.
ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ರಘು ಅವರು ಇಂದು ಬೆಳಗ್ಗೆ ಬೆಂಗಳೂರಿನ ದಾಸರಹಳ್ಳಿಯ ಅಮೃತ ನಗರದಲ್ಲಿರುವ ಅವರ ನಿವಾಸದಲ್ಲಿ 7.30ರ ಸುಮಾರಿಗೆ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ಆಶಾ ಅವರು ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಇವರ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರ ವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ನಿರರ್ಗಳವಾಗಿ ಮಾತನಾಡುತ್ತಿದ್ದ ರಘು ಅವರು ಆಹಾರ ಆರೋಗ್ಯದ ವಿಚಾರದಲ್ಲಿಅತ್ಯದ್ಭುತ ಜ್ಞಾನ ಹೊಂದಿದ್ದರು.
ಅಲ್ಲದೇ ಕೆ.ಸಿ. ರಘು ಅವರು ಹಲವು ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ್ದಾರೆ.
ರಘು ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಗಣ್ಯರು ಕಂಬನಿ ಮಿಡಿದ್ದಾರೆ. ಡಿಕೆಶಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ‘ನಾಡಿನ ಹೆಸರಾಂತ ಆಹಾರ ತಜ್ಞರಾದ ಶ್ರೀ ಕೆ.ಸಿ.ರಘು ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಶ್ರೀಯುತರು ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದು ಆಹಾರದ ಕುರಿತು ಅರಿವು ಮೂಡಿಸಿದ್ದಾರೆ. ಭಗವಂತ’ ಎಂದು ಬರೆದುಕೊಂಡಿದ್ದಾರೆ.