
CWC2023 : ವಿಶ್ವಕಪ್ ನಿಂದ ಹಾರ್ದಿಕ್ ಪಾಂಡ್ಯ ಔಟ್ – ಪ್ರತಿಭಾನ್ವಿತ ವೇಗಿ ಟೀಂ ಇಂಡಿಯಾಗೆ ಎಂಟ್ರಿ..!
- ಕ್ರೀಡಾ ಸುದ್ದಿ
- November 4, 2023
- No Comment
- 81
ನ್ಯೂಸ್ ಆ್ಯರೋ : ಬಾಂಗ್ಲಾದೇಶದ ವಿರುದ್ದದ ಪಂದ್ಯದಲ್ಲಿ ಮೊಣಕಾಲಿಗೆ ಗಾಯಗೊಂಡು ವಿಶ್ರಾಂತಿಯಲ್ಲಿದ್ದ ಭಾರತ ತಂಡದ ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದಿದ್ದಾರೆ. ಇದರಿಂದ ಗೆಲುವಿನ ನಾಗಲೋಟದಲ್ಲಿರುವ ಭಾರತ ತಂಡಕ್ಕೆ ಆಘಾತವಾಗಿದೆ.
ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮೊದಲ ಓವರ್ ಬೌಲಿಂಗ್ ಸಂದರ್ಭದಲ್ಲಿ ಕಾಲಿನ ನೋವಿಗೆ ತುತ್ತಾಗಿದ್ದರು. ಕೇವಲ ಮೂರು ಎಸೆತ ಬೌಲಿಂಗ್ ಮಾಡಿದ್ದ ಅವರು ನಂತರ ಮೈದಾನ ತೊರೆದಿದ್ದರು. ಆರಂಭದಲ್ಲಿ ಸಾಮಾನ್ಯ ಗಾಯ ಎಂದು ಭಾವಿಸಲಾಗಿತ್ತಾದರೂ ಬಳಿಕ ಗಾಯದ ತೀವ್ರತೆ ಹೆಚ್ಚಾಗಿರುವುದು ಕಂಡುಬಂದಿತ್ತು. ಹೀಗಾಗಿ ಎನ್‌ಸಿಎಗೆ ತೆರಳಿ ತಂಡಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದರು.

ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡು ಬೆಂಗಳೂರಿನಲ್ಲಿ ನಡೆಯಲಿರುವ ನೆದರ್‌ಲ್ಯಾಂಡ್ಸ್ ವಿರುದ್ಧದ ಪಂದ್ಯಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಹಾರ್ದಿಕ್ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಬೀಳುವಂತಾಗಿದೆ. ಹೀಗಾಗಿ ಭಾರತ ತಂಡವು ಪ್ರಮುಖ ಆಲ್‌ರೌಂಡರ್ ಆಟಗಾರನನ್ನು ಕಳೆದುಕೊಂಡಿದೆ.

ಹಾರ್ದಿಕ್ ಪಾಂಡ್ಯ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ವೇಗದ ಬೌಲರ್ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಬುಲಾವ್ ನೀಡಲಾಗಿದೆ. ಈ ಮೂಲಕ ಕೆ ಎಲ್ ರಾಹುಲ್ ಜತೆಗೆ ಭಾರತ ತಂಡದಲ್ಲಿ ಇಬ್ಬರು ಕರ್ನಾಟಕದ ಆಟಗಾರರು ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿಭಾನ್ವಿತ ವೇಗಿಗೆ ಅದೃಷ್ಟ ಖುಲಾಯಿಸಿದ್ದು, ಪ್ರಸಿದ್ಧ್ ಕೃಷ್ಣ ಕೂಡ ಸುದೀರ್ಘ ಕಾಲ ಗಾಯದಿಂದ ಮೈದಾನದಿಂದ ದೂರವಾಗಿದ್ದರು. ಈ ವರ್ಷ ಜಸ್ಪ್ರೀತ್ ಬೂಮ್ರಾ ಜೊತೆಗೆ ಕಳೆದ ಐರ್ಲೆಂಡ್ ಪ್ರವಾಸದ ಮೂಲಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಆ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು.
ಭಾರತ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಸತತ 7 ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದು, ಭಾನುವಾರ ದಕ್ಷಿಣ ಆಫ್ರಿಕಾದ ವಿರುದ್ಧ ಸೆಣಸಲಿದೆ.