
ಶುಭ್ಮನ್ ಗಿಲ್ ಜರ್ಸಿಯಲ್ಲಿದ್ದ ಗೋಲ್ಡ್ ಕಾಯಿನ್ ಗುಟ್ಟೇನು ಗೊತ್ತೇ? – ಗಿಲ್ ಅದೃಷ್ಟಕ್ಕಾಗಿ ಕಾಯಿನ್ ಹಾಕೊಂಡಿದ್ರಾ?
- ಕ್ರೀಡಾ ಸುದ್ದಿ
- October 21, 2023
- No Comment
- 59
ನ್ಯೂಸ್ ಆ್ಯರೋ : ಐಸಿಸಿ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶದ ವಿರುದ್ಧ 6 ವಿಕೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದ ಭಾರತ ತಂಡದಲ್ಲಿ ಎಲ್ಲರ ಗಮನ ಸೆಳೆದದ್ದು ವಿರಾಟ್ ಕೊಹ್ಲಿ ಮತ್ತು ಶುಭ್ ಮನ್ ಗಿಲ್.
ವಿಶ್ವಕಪ್‌ನಲ್ಲಿ ಮೂರನೇ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿ ಭಾರತದ ಗೆಲುವಿಗೆ ವಿರಾಟ್ ಕೊಹ್ಲಿ ಕಾರಣರಾದರು. ಇನ್ನು ರೋಹಿತ್ ಶರ್ಮ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಶುಭ್‌ಮನ್ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿದರು. ಆದರೆ ಇಲ್ಲಿ ಗಿಲ್ ಅವರ ಬ್ಯಾಟಿಂಗಿಂತ ಹೆಚ್ಚಾಗಿ ಅವರ ಧರಿಸಿದ್ದ ಚಿನ್ನದ ಬಣ್ಣದ ಬ್ಯಾಡ್ಜ್ ಎಲ್ಲರ ಗಮನ ಸೆಳೆದಿದೆ.
ಜೆರ್ಸಿಯ ಕಾಲರ್‌ನಲ್ಲಿ ಗೋಲ್ಡ್ ಬ್ಯಾಡ್ಜ್ ಧರಿಸಿದ್ದ ಉದಯೋನ್ಮುಖ ಬಲಗೈ ಬ್ಯಾಟ್ಸ್‌ಮನ್ ಗಿಲ್ ಬಾಂಗ್ಲಾದೇಶದ 257 ರನ್‌ಗಳ ಗುರಿ ಬೆನ್ನಟ್ಟುವ ರೋಹಿತ್ ಶರ್ಮ ಅವರೊಂದಿಗೆ ಉತ್ತಮ ಆರಂಭ ನೀಡಿದರು. 88 ರನ್ ಜೊತೆಯಾಟವಾಡಿದ ಈ ಜೋಡಿಯಲ್ಲಿ ರೋಹಿತ್ ಔಟ್ ಆದ ಬಳಿಕ ಕೊಹ್ಲಿ ಜೊತೆಗೆ ಗಿಲ್ 55 ಎಸೆತಗಳಲ್ಲಿ 53 ರನ್ ಸಿಡಿಸುವ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಮೊದಲ ಅರ್ಧಶತಕ ಬಾರಿಸಿದ್ದರು.
ಈ ನಡುವೆ ಎಲ್ಲರ ಗಮನ ಸೆಳೆದದ್ದು ಗಿಲ್ ಅವರ ಜರ್ಸಿಯ ಕಾಲರ್‌ನಲ್ಲಿದ್ದ ಚಿನ್ನದ ಬಣ್ಣದ ಸಣ್ಣ ಕಾಯಿನ್. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಚರ್ಚೆ ನಡೆಯಿತು. ಕೆಲವರು ಇದನ್ನು ಗಿಲ್ ಅದೃಷ್ಟಕ್ಕಾಗಿ ಬಳಸಿದ್ದರು ಎಂದಿದ್ದರು. ಆದರೆ ಇದರ ಹಿಂದಿರುವ ಕಾರಣವೇ ಬೇರೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಐಸಿಸಿ ತಿಂಗಳ ಆಟಗಾರ ಎನ್ನುವ ಶ್ರೇಯವನ್ನು ನೀಡುತ್ತಿದೆ. ಅದರಂತೆ ಸೆಪ್ಟೆಂಬರ್ ತಿಂಗಳ ಐಸಿಸಿ ಆಟಗಾರ ಗೌರವವನ್ನು ಶುಭ್‌ಮನ್ ಗಿಲ್ ಗೆ ನೀಡಲಾಗಿದೆ. ಹೀಗಾಗಿ ಐಸಿಸಿ ನೀಡಿರುವ ಚಿನ್ನದ ಬಣ್ಣದ ನಾಣ್ಯವನ್ನು ಅವರು ಜರ್ಸಿಯಲ್ಲಿ ಬ್ಯಾಡ್ಜ್ ನಂತೆ ಹಾಕಿಕೊಂಡಿದ್ದರು.
ಏಷ್ಯಾಕಪ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಶುಭ್‌ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಮಿಂಚಿದ್ದರು. ಹೀಗಾಗಿ ಅವರಿಗೆ ಐಸಿಸಿ ಈ ಶ್ರೇಯಾಂಕವನ್ನು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಇದು ನನ್ನ ಶ್ರೇಷ್ಠತೆಯನ್ನು ಮತ್ತಷ್ಟು ಮುಂದುವರಿಸಲು ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.