
ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ ಯುವರಾಜ್ ಸಿಂಗ್ ಪತ್ನಿ – ಹೇಜೆಲ್ ಕೀಚ್ ನಿರ್ಧಾರಕ್ಕೆ ಕಾರಣವಾಗಿದ್ದು ಏನ್ ಗೊತ್ತಾ?
- ಕ್ರೀಡಾ ಸುದ್ದಿ
- October 16, 2023
- No Comment
- 53
ನ್ಯೂಸ್ ಆ್ಯರೋ : ಹೆಣ್ಣಿಗೆ ಕೂದಲಿನ ಮೇಲೆ ಎಷ್ಟು ಪ್ರೀತಿ ಇರುತ್ತದೆ ಎಂದರೆ ಅದಕ್ಕೆ ಕೊಂಚ ಹಾನಿಯಾದರೂ ಅವಳು ಸಹಿಸಲಾರಳು. ಹೀಗಿರುವಾಗ ನಟಿ, ಮಾಡೆಲ್ ಆಗಿ ಗುರುತಿಸಿಕೊಂಡವರು ತಮ್ಮ ಕೂದಲಿಗೆ ಕತ್ತರಿ ಪ್ರಯೋಗ ಮಾಡುವರೇ ? ಆದರೆ ಇಲ್ಲೊಬ್ಬರು ಮಾಡಿದ್ದಾರೆ. ಅದೂ ದಾನ ಮಾಡುವ ಉದ್ದೇಶದಿಂದ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಪತ್ನಿ ಹೇಜಲ್ ಕೀಚ್ ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದಾರೆ.
ಮಾಡೆಲ್ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ಇವರು ತಮ್ಮ ಕೂದಲು ಕತ್ತರಿಸಿದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿರುವ ಹೇಝಲ್ ಕೀಚ್, ತಾವು ಯಾಕಾಗಿ ಈ ನಿರ್ಧಾರ ಮಾಡಿದೆ ಎನ್ನುವುದನ್ನೂ ಹೇಳಿಕೊಂಡಿದ್ದಾರೆ.
ಆಗಸ್ಟ್ ನಲ್ಲಿ ಎರಡನೇ ಮಗುವಿಗೆ ಹೇಜೆಲ್ ಕೀಚ್ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಈ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಕೂದಲು ಉದುರುವ ಸಮಸ್ಯೆ ಬಹು ಮುಖ್ಯವಾದದ್ದು. ಇದನ್ನು ಸಹಿಸುವುದು ಸಾಧ್ಯವಿಲ್ಲ. ಆದರೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರು ಪ್ರತಿ ನಿತ್ಯ ಈ ಯಾತನೆ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಕ್ಯಾನ್ಸರ್ ನಿಂದ ಬದುಕುಳಿದ ಮಕ್ಕಳಿಗಾಗಿ ತಮ್ಮ ಕೂದಲನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ವಿಗ್‌ಗಳನ್ನು ತಯಾರಿಸಲು ನಾನು ಕೊಡುಗೆ ನೀಡಲು ಬಯಸುತ್ತೇನೆ. ಇದರಲ್ಲಿ ಪತಿ ಯುವರಾಜ್ ಸಿಂಗ್ ಅವರ ಪ್ರೇರಣೆ ಇನ್ನಷ್ಟು ಸ್ಫೂರ್ತಿ ನೀಡಿತ್ತು. ಯುವರಾಜ್ ಸಿಂಗ್ ತಮ್ಮ ಕ್ಯಾನ್ಸರ್ ಚಿಕಿತ್ಸೆ ಭಾಗವಾಗಿ ಕೀಮೊಥೆರಪಿ ವೇಳೆ ಕೂದಲು ಉದುರುವಿಕೆಯ ಸಂದರ್ಭದಲ್ಲಿ ಸಾಕಷ್ಟು ನೋವು ಅನುಭವಿಸಿದ್ದರು. ಹೀಗಾಗಿ ಅದನ್ನು ನಾನು ಅರಿತುಕೊಂಡೆ ಎಂದು ಹೇಜೆಲ್ ಕೀಚ್ ತಿಳಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಂನಲ್ಲಿರುವ ಲಿಟಲ್ ಪ್ರಿನ್ಸೆಸ್ ಟ್ರಸ್ಟ್‌ಗೆ ತನ್ನ ಕೂದಲನ್ನು ದಾನ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ಯುಕೆಯಲ್ಲಿದ್ದು, ನನ್ನ ಈ ನಿರ್ಧಾರ ಯಾರಿಗಾದರೂ ಸಹಾಯ ಮಾಡಬಹುದು ಎನ್ನುವ ನಂಬಿಕೆ ಇದೆ. ನನ್ನ ಕೂದಲು ದಾನವನ್ನು ಸ್ವೀಕರಿಸಿದ್ದಕ್ಕಾಗಿ ಲಿಟಲ್ ಪ್ರಿನ್ಸೆಸ್ ಟ್ರಸ್ಟ್‌ಗೆ ಧನ್ಯವಾದಗಳು ಎಂದು ಹೇಳಿದ್ದಾರೆ.