
ಶೀಘ್ರ ರಾಜ್ಯದ ಕಾಂಗ್ರೆಸ್ ಸರಕಾರ ಪತನ – ಭವಿಷ್ಯ ನುಡಿದಿದ್ದು ಯಾರು? ನೀಡಿದ ಕಾರಣವೇನು?
- ರಾಜಕೀಯ
- September 2, 2023
- No Comment
- 91
ನ್ಯೂಸ್ ಆ್ಯರೋ : ಆಪರೇಷನ್ ಮೂಲಕ ಕಾಂಗ್ರೆಸ್ ಬಿಜೆಪಿ ನಾಯಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಎನ್ನುವ ಆರೋಪದ ಮಧ್ಯೆಯೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಲೋಕಸಭಾ ಚುನಾವಣೆಗೆ ಮುನ್ನ ಅಥವಾ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಅಪಪ್ರಚಾರ
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಯೋಗ್ಯತೆಗೆ ಇಲ್ಲಿಯವರೆಗೆ ಬಿಜೆಪಿಯ ಒಬ್ಬ ಶಾಸಕರನ್ನು ಕರೆದೊಯ್ಯಲು ಸಾಧ್ಯವಾಗಿಲ್ಲ. ಬಿಜೆಪಿಯಿಂದ ಜನ ಬರುತ್ತಾರೆ ಎನ್ನುವ ಲೆಕ್ಕ ಹೇಳಿ ಅಪಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಗೆ 1 ತಿಂಗಳು ಸಮಯ ಕೊಡುತ್ತೇವೆ. ಬಿಜೆಪಿಯಿಂದ ಒಬ್ಬ ಶಾಸಕರನ್ನು ಕರೆದೊಯ್ಯಲಿ ನೋಡೋಣ. ಕಾಂಗ್ರೆಸ್ ಸರಕಾರವನ್ನು ಬೀಳಿಸುವ ವಿಚಾರದಲ್ಲಿ ಮತ್ತೆ ಆಪರೇಷನ್ ಕಮಲ ಆರಂಭವಾಗಲಿದೆ. ಬೇಕಿದ್ದರೆ ಸಚಿವ ಪ್ರಿಯಾಂಕ್ ಖರ್ಗೆ ಕಾದು ನೋಡಲಿ ಎಂದು ಸವಾಲು ಹಾಕಿದರು.
ಸೂರ್ಯ-ಚಂದ್ರ ಇರುವವರೆಗೂ ಕಾಂಗ್ರೆಸ್ ಬಿಟ್ಟು ಹೋಗಿರುವ 17 ಜನರ ಪೈಕಿ ಒಬ್ಬರನ್ನೂ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವುದಿಲ್ಲ ಎಂದು ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಈಗ ಏಕೆ ಅವರ ಉಸಾಬರಿ? ಎಂದು ಈಶ್ವರಪ್ಪ ಪ್ರಶ್ನಿಸಿದರು.
ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ತಿಹಾರ್ ಜೈಲಿನಲ್ಲಿದ್ದು ಬಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗ ಪ್ರಜ್ವಲ್ ರೇವಣ್ಣ ಪ್ರಕರಣ ಮುಂದಿಟ್ಟುಕೊಂಡು, ಜನಪ್ರತಿನಿಧಿಗಳು ಆಸ್ತಿ ವಿಚಾರಗಳನ್ನು ಮುಚ್ಚಿಡಬಾರದು ಎಂದು ಉಪದೇಶ ನೀಡುತ್ತಿರುವುದು ವಿಚಿತ್ರವಾಗಿದೆ ಎಂದು ಹೇಳಿದರು.