ಪುತ್ತಿಲ ಪರಿವಾರ ಬಿಜೆಪಿ ವಿಲೀನಕ್ಕೆ ಕಾಲ ಸನ್ನಿಹಿತ – ಯಡಿಯೂರಪ್ಪ, ವಿಜಯೇಂದ್ರ ಸಂಧಾನ ಬಹುತೇಕ ಯಶಸ್ವಿ, ಘೋಷಣೆಯೊಂದೇ ಬಾಕಿ

ನ್ಯೂಸ್ ಆ್ಯರೋ : ಪುತ್ತೂರಿನ ಹಿಂದೂ ಫೈರ್ ಬ್ರ್ಯಾಂಡ್ ಅರುಣ್ ಕುಮಾರ್ ಪುತ್ತಿಲ ನಾಯಕತ್ವದ ಪುತ್ತಿಲ ಪರಿವಾರ ಬಿಜೆಪಿ ಪಕ್ಷದೊಂದಿಗೆ ವಿಲೀನವಾಗುವ ಕಾಲ ಸನ್ನಿಹಿತವಾಗಿದ್ದು, ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ಸ್ಥಾನಮಾನದ ಆಫರ್ ನೀಡಿರುವ ಮಾಹಿತಿ ಹೊರಬಿದ್ದಿದೆ.

ರಾಜ್ಯ ಮಟ್ಟದ ಮಾಧ್ಯಮವೊಂದರ ವರದಿ ಪ್ರಕಾರ, ರಾಜ್ಯ ಬಿಜೆಪಿಯ ವರಿಷ್ಠರಾದ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ.ವಿ. ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಈ ಕುರಿತು ಅರುಣ್ ಪುತ್ತಿಲ ಜತೆ ಮಾತನಾಡಿದ್ದು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ. ಪಕ್ಷದ ಹಿರಿಯರ ಮಾತಿಗೆ ಅರುಣ್ ಪುತ್ತಿಲ ಸಮ್ಮತಿ ಸೂಚಿಸಿರುವುದಾಗಿ ಪುತ್ತಿಲ ಪರಿವಾರದ ಉನ್ನತ ಮೂಲಗಳು ಖಚಿತ ಪಡಿಸಿವೆ.

ಪುತ್ತಿಲ ಪರಿವಾರವು ಮೂರು ದಿನಗಳ ಹಿಂದೆ ಸಮಾಲೋಚನಾ ಸಭೆಯನ್ನು ನಡೆಸಿ ಬಿಜೆಪಿ ಜತೆ ವಿಲೀನಕ್ಕೆ ಹಲವು ಷರತ್ತುಗಳನ್ನು ವಿಧಿಸಿತ್ತು. ಜತೆಗೆ ಅವುಗಳ ಪೂರೈಕೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿತ್ತು. ಈಗ ಬಿಜೆಪಿ ಹೈಕಮಾಂಡ್‌ನಿಂದ ಪಕ್ಷ ಸೇರ್ಪಡೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ ಎನ್ನಲಾಗಿದೆ.

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪುತ್ತೂರಿನಲ್ಲಿ ಕಗ್ಗಂಟಾಗಿ ಪರಿಣಮಿಸಿದ್ದ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ವಿಚಾರ ಬಹುತೇಕ ಸುಖ್ಯಾಂತಗೊಳ್ಳುವತ್ತ ಸಾಗಿದೆ. ರಾಜ್ಯ ಬಿಜೆಪಿ ನಾಯಕರಿಂದ ಅರುಣ್ ಪುತ್ತಿಲರಿಗೆ ಗೌರವಯುತ ಹುದ್ದೆ ನೀಡಲು ನಿರ್ಧರಿಸಲಾಗಿದೆ. ಈ ಕುರಿತ ಮಾಹಿತಿಯನ್ನು ಅರುಣ್ ಪುತ್ತಿಲ ಅವರಿಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, “ಪುತ್ತಿಲ ಪರಿವಾರ ಹಾಗೂ ಬಿಜೆಪಿಗೆ ಸೇರಿದ ಎಲ್ಲರಿಗೂ ಇಂದಿನ ಬೆಳವಣಿಗೆ ಖುಷಿ ಸಂದಿದೆ. ನಾವು ಹಿಂದೆಯೂ ಬಿಜೆಪಿಯೇ ಆಗಿ ಇದ್ದೆವು. ಮುಂದಿನ ಕೆಲ ದಿನಗಳಲ್ಲಿ ನಾವು ಇನ್ನಷ್ಟು ಸಕ್ರಿಯವಾಗಿ ಬಿಜೆಪಿ ಜತೆ ಗುರುತಿಸಿಕೊಂಡು ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುವ ವಾತಾವರಣ ನಿರ್ಮಾಣವಾಗಲಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್ ಪುತ್ತಿಲ ಭೇಟಿಯಾಗಲಿದ್ದಾರೆ ಎಂದು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಬಿಜೆಪಿ ಸೇರ್ಪಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಮಾರ್ತ, ” ನಾವು ಬಿಜೆಪಿಯೇ… ಹಾಗಾಗಿ ನಾವು ಮತ್ತೆ ಸೇರ್ಪಡೆಯಾಗುವ ಅಗತ್ಯವಿಲ್ಲ. ಪುತ್ತಿಲ ಪರಿವಾರವನ್ನು ವಿಲೀನಗೊಳಿಸುವುದಷ್ಟೇ ಬಾಕಿ ಇರುವುದು. ಇಂಥದ್ದೊಂದು ಸುಸಂದರ್ಭ ಕೂಡಿ ಬರಲು ಕಾರಣರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ.ವಿ. ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಹಿಂದುತ್ವದ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಪುತ್ತಿಲ ಪರಿವಾರ ನಿರಂತರ ಬಿಜೆಪಿಗೆ ಆಘಾತ ನೀಡುತ್ತಲೇ ಬಂದಿದೆ. ಇದೇ ಕಾರಣಕ್ಕೆ ಲೋಕಾಸಭಾ ಚುನಾವಣಾ ಸಂದರ್ಭ ಇದು ಮರುಕಳಿಸದಂತೆ ಪುತ್ತಿಲ ಪರಿವಾರವನ್ನು ಶರ್ತಗಳೊಂದಿಗೆ ಬಿಜೆಪಿಗೆ ವಿಲೀನಗೊಳಿಸಲು ತಯಾರಿ ನಡೆಸಲಾಗಿತ್ತು. ಆದ್ರೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಬಿಜೆಪಿಯ ಕೆಲವು ನಾಯಕರ ವಿರೋಧ ವ್ಯಕ್ತವಾಗಿತ್ತು. ಇದೇ ವೈಮನಸ್ಸು ಬೆಳೆದು ಕಳೆದ ಎಳೆಂಟು ತಿಂಗಳು ಕಳೆದರೂ ಒಮ್ಮತ ಮೂಡದೆ ಹಾಗಯೇ ಉಳಿದಿತ್ತು. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಬಿಜೆಪಿ ಎಚ್ಚರಿಕೆಯ ನಡೆ ಪ್ರದರ್ಶಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


Comments

Leave a Reply

Your email address will not be published. Required fields are marked *