ಡಿ.ಕೆ ಸುರೇಶ್ ಹಣಿಯಲು ಮೈತ್ರಿ ಪಕ್ಷಗಳಿಂದ ಬಿಗ್ ಸ್ಟ್ರಾಟಜಿ – ಡಿಕೆಎಸ್ ವಿರುದ್ಧ ಡಾ. ಮಂಜುನಾಥ್ ಕಣಕ್ಕಿಳಿಸಲು ಭರ್ಜರಿ ಪ್ಲ್ಯಾನ್

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಕಾವು ಏರಿದ್ದು, ಎಲ್ಲಾ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳಿಗಾಗಿ ಹುಡುಕಾಟ ಆರಂಭಿಸಿವೆ. ಲೋಕಸಭೆ ಚುನಾವಣೆಗೆ ಹಳೆ ಮೈಸೂರು ಭಾಗದಲ್ಲಿ ಮತ ಕ್ರೋಡೀಕರಣಕ್ಕೆ ಬಿಜೆಪಿ -ಜೆಡಿಎಸ್‌ ಜಂಟಿ ತಾಲೀಮು ಮಹತ್ವದ ಘಟ್ಟ ತಲುಪಿದ್ದು, ಬೆಂಗಳೂರು ಗ್ರಾಮಾಂತರದಿಂದ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಕಣಕ್ಕಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ಮುಖ್ಯಸ್ಥರು ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್‌ ಜನಮನದ ಪರಿಚಿತ ವ್ಯಕ್ತಿತ್ವವಾಗಿದ್ದು, ಇತ್ತೀಚೆಗಷ್ಟೇ ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಹೊಂದಿದ್ದಾರೆ.

ಡಾ. ಮಂಜುನಾಥ್‌ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ನಿರೀಕ್ಷೆಯಿದೆ. ಹಳೆ ಮೈಸೂರು ಭಾಗದಲ್ಲಿ ಮೈತ್ರಿಯ ಮತಬ್ಯಾಂಕ್‌ ಕ್ರೋಢೀಕರಣ ದೃಷ್ಟಿಯಿಂದ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಸದ್ಯ ಡಿ.ಕೆ.ಸುರೇಶ್‌ ರಾಜ್ಯದ ಏಕೈಕ ಕಾಂಗ್ರೆಸ್‌ ಸಂಸದರಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಗಾಗಿ ಶೋಧದಲ್ಲಿ ತೊಡಗಿದ್ದ ಬಿಜೆಪಿ -ಜೆಡಿಎಸ್‌ ಮೈತ್ರಿ ಪಾಳಯದಲ್ಲಿ ಡಾ.ಮಂಜುನಾಥ್‌ ಸಮರ್ಥ ಅಭ್ಯರ್ಥಿ ಎಂಬ ಒಲವು ಮೂಡಿದೆ.

ಜೆಡಿಎಸ್ ನಿಂದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧೆಗೆ ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಡಾ.ಮಂಜುನಾಥ್ ರನ್ನ ಕಣಕ್ಕಿಳಿಸಲು ಮೈತ್ರಿ ನಾಯಕರು ಚಿಂತನೆ ನಡೆಸಿದ್ದು, ಈಗಾಗಲೇ ಡಾ ಮಂಜುನಾಥ್ ಜೊತೆ ಮಾತುಕತೆ ಮೈತ್ರಿ ನಾಯಕರು ನಡೆಸಿದ್ದಾರೆ. ಅಲ್ಲದೇ ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸಿದ್ರೆ ಹೆಚ್ಚಿನ ಲಾಭ ಅನ್ನೋ ಚಿಂತನೆಯೂ ಇದೆ. ಡಾ ಮಂಜುನಾಥ್ ಸ್ಪರ್ಧಿಸಿದ್ರೆ ಸಂಸದ ಡಿಕೆ ಸುರೇಶ್‌ಗೆ ಟಫ್ ಫೈಟ್ ಇದ್ದು, ಎರಡು ಪಕ್ಷದ ನಾಯಕರ ಜೊತೆ ಡಾ. ಮಂಜುನಾಥ್ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಲಾಭವಾಗುವ ನಿರೀಕ್ಷೆಯಿದೆ.