
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು
- ರಾಜಕೀಯ
- March 20, 2023
- No Comment
- 78
ನ್ಯೂಸ್ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ 2ನೇ ವಾರ ಮತದಾನ ನಡೆಯುವ ಸಾಧ್ಯತೆ ಇದೆ.
ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಕರ್ನಾಟಕಕ್ಕೆ ಬಂದು 3 ದಿನಗಳ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದೆ. ಆಯೋಗವು ಈಗಾಗಲೇ ಚುನಾವಣೆ ನಡೆಸಲು ಸಂಪೂರ್ಣ ಸಿದ್ಧತೆಗಳನ್ನು ಕೈಗೊಂಡಿದೆ.
ಪ್ರಸಕ್ತ ರಾಜ್ಯ ಸರ್ಕಾರದ ಅವಧಿ ಮೇ. 24 ಕ್ಕೆ ಮುಕ್ತಾಯವಾಗುವ ಕಾರಣ 2018ರ ವೇಳಾಪಟ್ಟಿಯಂತೆಯೇ ಈ ಬಾರಿಯೂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಳೆದ ಬಾರಿ ಮೇ 12 ರಂದು ಮತದಾನ ನಡೆದಿತ್ತು. ಹೀಗಾಗಿ, ಏಪ್ರಿಲ್ ತಿಂಗಳ 2 ನೇ ವಾರದಲ್ಲಿ ಅಧಿಸೂಚನೆ ಹೊರಡಿಸಿ, ಮೇ ಮೊದಲ ವಾರದ ವೇಳೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲು ಚುನಾವಣೆ ಆಯೋಗ ಚಿಂತನೆ ನಡೆಸಿದೆ.
ಚುನಾವಣಾ ಆಯೋಗದ ಚುನಾವಣೆಯ ಸಿದ್ಧತೆ ನಡೆಸುತ್ತಿದ್ದಂತೆ ಇತ್ತ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಕಾರ್ಯ ಬಿರುಸಿನಿಂದ ಕೂಡಿದೆ. ಕೆಲ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳು ಇರುವುದರಿಂದ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟುವ ಸಾಧ್ಯತೆ ಇರುವುದರಿಂದ ಪಕ್ಷಗಳೂ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ.