
ಹೊಸ ಸಂಸತ್ ಭವನ ಮೋದಿಯಿಂದ ಉದ್ಘಾಟನೆ ಹಿನ್ನೆಲೆ – 19 ವಿರೋಧ ಪಕ್ಷಗಳಿಂದ ಬಹಿಷ್ಕಾರ, ಯಾರೆಲ್ಲ ಭಾಗವಹಿಸ್ತಾರೆ ಗೊತ್ತಾ?
- ರಾಜಕೀಯ
- May 26, 2023
- No Comment
- 73
ನ್ಯೂಸ್ ಆ್ಯರೋ : ಇದೇ ರವಿವಾರ(ಮೇ 28) ಐತಿಹಾಸಿಕ ಕ್ಷಣಗಳಿಗೆ ದೇಶ ಸಾಕ್ಷಿಯಾಗಲಿದ್ದು, ಅಂದು ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಭವನ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಏಳು ಪ್ರತಿಪಕ್ಷಗಳು ಭಾಗವಹಿಸಿದರೆ, 19 ಪ್ರತಿಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಏಳು ಪ್ರತಿಪಕ್ಷಗಳು ಸೇರಿದಂತೆ 25 ರಾಜಕೀಯ ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತೀಯ ಜನತಾ ಪಾರ್ಟಿ ಸೇರಿದಂತೆ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ದ 18 ಮಿತ್ರ ಪಕ್ಷಗಳ ಹೊರತಾಗಿ, ಏಳು ಎನ್ ಡಿಎಯೇತರ ಪಕ್ಷಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿವೆ.
ಎನ್‌ಡಿಎಗೆ ಸಮಾಧಾನ
ಬಹುಜನ ಸಮಾಜ ಪಕ್ಷ, ಶಿರೋಮಣಿ ಅಕಾಲಿದಳ, ಜನತಾ ದಳ(ಜಾತ್ಯತೀತ), ಲೋಕ ಜನಶಕ್ತಿ ಪಕ್ಷ- ರಾಮ್ ವಿಲಾಸ್, ಯುವಜನ ಶ್ರಮಿಕ ರೈತ ಕಾಂಗ್ರೆಸ್, ಬಿಜು ಜನತಾ ದಳ ಮತ್ತು ತೆಲುಗು ದೇಶಂ ಪಕ್ಷ ಸೇರಿದಂತೆ ಏಳು ಎನ್‌ಡಿಎಯೇತರ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಲೋಕಸಭೆಯಲ್ಲಿ ಒಟ್ಟು 50 ಸಂಸದರನ್ನು ಹೊಂದಿರುವ ಈ ಏಳು ಪಕ್ಷಗಳ ಉಪಸ್ಥಿತಿಯು ಎನ್‌ಡಿಎಗೆ ದೊಡ್ಡ ಸಮಾಧಾನ ನೀಡಿದೆ.
ಕಾಂಗ್ರೆಸ್, ಎಡಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ಹತ್ತೊಂಬತ್ತು ಪ್ರತಿಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಘೋಷಿಸಿವೆ.